ದೀಪಾವಳಿ ಹಬ್ಬ – ಪಟಾಕಿ ಮಾರಾಟ, ಬಳಕೆ ಸಂಬಂಧ ಸರಕಾರದಿಂದ ಮಾರ್ಗಸೂಚಿ ಪ್ರಕಟ

ಮಂಗಳೂರು(ಬೆಂಗಳೂರು): ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಮಾರಾಟ, ಬಳಕೆ ಸಂಬಂಧ ರಾಜ್ಯಸರಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಪಟಾಕಿಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯದಿಂದ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುವುದನ್ನು ತಡೆಗಟ್ಟಲು ಸರಕಾರ ಈ ಮಾರ್ಗಸೂಚಿ ಹೊರಡಿಸಿದೆ.

  1. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ, ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು, ಆರೋಗ್ಯಧಿಕಾರಿ, ತಹಶೀಲ್ದಾರ್, ಜಿಲ್ಲಾ ಪರಿಸರ ಅಧಿಕಾರಿ, ಪೊಲೀಸ್‌ ಅಧಿಕಾರಿ, ಆಸಕ್ತ ನಾಗರಿಕರು ಹಾಗೂ ಸ್ಥಳೀಯ ಸರಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆಗಳನ್ನು ರಚಿಸಬೇಕು.
  2. ಯಾವುದೇ ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಹಾಗೂ ಇನ್ಯಾವುದೇ ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಸ್ಫೋಟಿಸುವಂತಿಲ್ಲ ಅಥವಾ ಬಳಸುವಂತಿಲ್ಲ.
  3. ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಬೇಕು.
  4. ಹಸಿರು ಪಟಾಕಿಯಲ್ಲದ, ಇನ್ನಾವುದಾದರೂ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
  5. ಎಲ್ಲಾ ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂಆರ್ ಕೋಡ್ ಇರುತ್ತದೆ, ಸದರಿ ಚಿಹ್ನೆಯ ಬಗ್ಗೆ ಸಂಬಂಧಪಟ್ಟ ಜಿಲ್ಲೆಯ ಪರಿಸರ ಅಧಿಕಾರಿಗಳಿಂದ ಖಚಿತ ಪಡಿಸಿಕೊಳ್ಳುವುದು. ಸದರಿ ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿಯೆನಿಸುವುದಿಲ್ಲ ಮತ್ತು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
  6. ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಹಾಗೂ ಇವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು.
  7. ಅನಧಿಕೃತವಾಗಿ ಯಾವುದೇ ರೀತಿಯ ನಿಷೇಧಿತ ಪಟಾಕಿಗಳನ್ನು ಸಾಗಾಟ ಮಾಡುತ್ತಿದ್ದಲ್ಲಿ ಕೂಡಲೇ ವಾಣಿಜ್ಯ ತೆರಿಗೆ ಇಲಾಖೆಯಿಂದ ರಾಜ್ಯದ ಗಡಿಗಳಲ್ಲಿರುವ ತಮ್ಮ ತನಿಖಾ ಠಾಣೆಗಳ ಮುಖಾಂತರ ನಿಷೇಧಿತ ಪಟಾಕಿಗಳು ಹಾಗೂ ಸಂಬಂಧಿತ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ದಿನಕ್ಕೆ 2 ಗಂಟೆ ಮಾತ್ರ ಸುಡುಮದ್ದು ಸಿಡಿಸಲು ಅವಕಾಶ ನೀಡಲಾಗಿದ್ದು, ರಾಜ್ಯಾದ್ಯಂತ ರಾತ್ರಿ 8 ರಿಂದ 10ರವರೆಗೆ ಮಾತ್ರ ಅವಕಾಶವಿದ್ದು ಉಳಿದ ಸಮಯದಲ್ಲಿ ಸುಡುಮದ್ದು ಸಿಡಿಸಲು ಅವಕಾಶವಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸುಪ್ರಿಂಕೋರ್ಟ್‌ ಆದೇಶದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದ್ದು ಅದರಂತೆ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here