ನೇಪಾಳದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ – 128 ಜನರು ಸಾವು – ಹಲವರಿಗೆ ಗಾಯ

ಮಂಗಳೂರು(ನೇಪಾಳ): ನೇಪಾಳದ ಕಠ್ಮಂಡು, ಪಶ್ಚಿಮ ರುಕುಂ, ಜಾಜರಕೋಟ್ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ 128 ಮಂದಿ ಸಾವನ್ನಪ್ಪಿದ್ದು, 140 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ದೆಹಲಿ-ಎನ್‌ಸಿಆರ್ ಪ್ರದೇಶ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಪ್ರಬಲ ಕಂಪನಗಳು ಸಂಭವಿಸಿವೆ. ಭೂಕಂಪವು ನ.3ರ ರಾತ್ರಿ 11:32 ಕ್ಕೆ ಸಂಭವಿಸಿದೆ. ಪರ್ವತ ಶ್ರೇಣಿಗಳಿಂದ ಕೂಡಿದ ಈ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳ ಪ್ರಕಾರ, ಭೂಕಂಪದ ಕೇಂದ್ರಬಿಂದು ನೇಪಾಳದ ಜಜರ್ಕೋಟ್ ಜಿಲ್ಲೆಯ ಲಾಮಿಡಾಂಡಾ ಪ್ರದೇಶದಲ್ಲಿದೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಸಂಭವಿಸಿದ ಸರಣಿ ಭೂಕಂಪಗಳ ಬೆನ್ನಲ್ಲೇ ನ.3ರ ರಾತ್ರಿ ಭೂಕಂಪನ ಸಂಭವಿಸಿದೆ. ಕೆಲವು ದಿನಗಳ ಹಿಂದೆ, ಅ.22 ರಂದು ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರಬಿಂದು ಧಾಡಿಂಗ್‌ನಲ್ಲಿದ್ದು, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿಯೂ ಭೂಕಂಪದ ಕಂಪನದ ಅನುಭವವಾಗಿತ್ತು.

ಅ.15 ರಂದು, ಹರಿಯಾಣದಲ್ಲಿ 3.1 ತೀವ್ರತೆಯ ಭೂಕಂಪನವಾಗಿದ್ದು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇದರ ಅನುಭವವಾಗಿತ್ತು. ಅ.3 ರಂದು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿದ್ದವು. ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿತ್ತು.

LEAVE A REPLY

Please enter your comment!
Please enter your name here