ಸಾಂಪ್ರದಾಯಿಕ ಮರಳುಗಾರಿಕೆ ಆರಂಭಿಸುವ ವಿಚಾರದಲ್ಲಿ ಸರಕಾರದ ವಿಳಂಬ ನೀತಿ-ಶಾಸಕ ವೇದವ್ಯಾಸ್‌ ಕಾಮತ್‌

ಮಂಗಳೂರು: ಪರಿಸರಾತ್ಮಕ ಕಾರಣಗಳಿಂದ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ಆರಂಭಿಸಲು ಕೆಸಿಝಡ್‌ಎಂಎ ಅನುಮತಿ ಅಗತ್ಯ. ಅದರಂತೆ ಈಗಾಗಲೇ ಜಿಲ್ಲಾಡಳಿತದ ಹಂತದಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಪೂರೈಸಿ ವರದಿಯನ್ನು ಕೆಸಿಝಡ್‌ಎಂಎ ಗೆ ಕಳುಹಿಸಲಾಗಿದ್ದರೂ ನಿಗದಿತ ಸಮಯದೊಳಗೆ ಸಭೆ ನಡೆಸಿ ಅನುಮತಿ ನೀಡದೇ ಅನಗತ್ಯ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಶೀಘ್ರದಲ್ಲಿ ಆರಂಭಗೊಳ್ಳದಿದ್ದರೆ ಮರಳು ಕೊರತೆಯಿಂದಾಗಿ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಸಹಜವಾಗಿ ಇದನ್ನೇ ನಂಬಿ ಬದುಕು ನಡೆಸುವ ಕಾರ್ಮಿಕ ಕುಟುಂಬಗಳು ಅತೀವ ಸಂಕಷ್ಟ ಎದುರಿಸಲಿವೆ. ಈಗಾಗಲೇ ದುಬಾರಿ ದರದಿಂದಾಗಿ ಜನಸಾಮಾನ್ಯರಿಗೆ ಮರಳು ಖರೀದಿಸಲೂ ಆಗುತ್ತಿಲ್ಲ. ಜಿಲ್ಲೆಯ ಜನತೆಯ ಈ ಸಂಕಷ್ಟಕ್ಕೆ ರಾಜ್ಯ ಸರಕಾರದ ನಿರ್ಲಕ್ಷ್ಯ, ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನವೇ ನೇರ ಕಾರಣ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.

ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ 9 ಡಯಾಲಿಸಿಸ್ ಯಂತ್ರಗಳು‌ ಕೆಟ್ಟು ಹೋಗಿದ್ದು ಕೂಡಲೇ ಹೊಸ ಯಂತ್ರಗಳನ್ನು ನೀಡಬೇಕು, ಕದ್ರಿ ಪಾರ್ಕಿನ ಹೊರಗಡೆ ಉದ್ಘಾಟನೆಗೊಂಡಿರುವ ಮಳಿಗೆಗಳ ಬಗ್ಗೆ ಕಾನೂನು ಬದ್ಧವಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಪರಿಶಿಷ್ಟ ಜಾತಿ/ಪಂಗಡದ ಹಾಗೂ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದ್ದು ಶೀಘ್ರ ಪಾವತಿಗೆ ಕ್ರಮಕೈಗೊಳ್ಳಬೇಕು, ಅಲ್ಪಸಂಖ್ಯಾತರ ಸ್ವ ಉದ್ಯೋಗಕ್ಕಾಗಿ ನೀಡುವ ಶ್ರಮಶಕ್ತಿ ಲೋನ್ ಸ್ಕೀಮ್ ನಲ್ಲಿ ಈ ಬಾರಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದ್ದು ಎಲ್ಲರಿಗೂ ನ್ಯಾಯ ದೊರಕುವಂತೆ ಮಾಡಬೇಕು, ಸರಕಾರ ಅನುದಾನಗಳನ್ನು ತಡೆಹಿಡಿದ ಪರಿಣಾಮ ಕ್ಷೇತ್ರದ ರಸ್ತೆಗಳ, ಚರಂಡಿಗಳ ಕಾಮಗಾರಿಗಳು ಅರ್ಧಕ್ಕೆ ನಿಂತು ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದು ಅನುದಾನ ಬಿಡುಗಡೆ ಮಾಡಬೇಕು, ಈ ಹಿಂದಿನ ಕಾಮಗಾರಿಗಳಿಗೆ ಈಗಾಗಲೇ ನಿಯೋಜನೆಗೊಂಡ ಅನುದಾನವನ್ನೂ ಸಹ ಬಿಡುಗಡೆ ಮಾಡಬೇಕು, ಕೂಡಲೇ ಎಲ್ಲಾ ಅನುದಾನಗಳನ್ನು ಬಿಡುಗಡೆಗೊಳಿಸಿ ಕಾಮಗಾರಿ ಮುಂದುವರಿಸಲು ಆದೇಶ ನೀಡಬೇಕು ಎಂದು ಶಾಸಕರು ಆಗ್ರಹಿಸಿದರು.

ಮಂಗಳೂರಿನಲ್ಲಿ ಆಸ್ತಿ ಮಾರಾಟ ಹಾಗೂ ಖರೀದಿಸುವ ಸಂದರ್ಭದಲ್ಲಿ ಮಿನಿ ವಿಧಾನಸೌಧದ
ಉಪನೋಂದಣಿ ಕಛೇರಿಯಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸಿ ಬಯೋಮೆಟ್ರಿಕ್ ನೀಡಿದ ನಂತರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಡ್ರಾ ಆಗಿ ವಂಚನೆಯಾದವರಿಗೆ ಸರಕಾರ ಪರಿಹಾರ ಒದಗಿಸಬೇಕು,  ಇ-ಖಾತಾ ಸಮಸ್ಯೆಯನ್ನು ಆದ್ಯತೆ ಮೇರೆಗೆ ಅತ್ಯಂತ ತುರ್ತಾಗಿ ಸರಿಪಡಿಸಬೇಕು, ಈ ವಿಚಾರಗಳ ಬಗ್ಗೆ ಸರ್ಕಾರ ಗಮನಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್‌ ಹೋರಾಟದ ಮೂಲಕ ಸರ್ಕಾರವನ್ನು ಸರಿ ದಾರಿಗೆ ತರುವ ಕೆಲಸ ಮಾಡಲಿದ್ದೇವೆ ಎಂದು ಶಾಸಕರು ಎಚ್ಚರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಅಜಯ್ ರಾಜ್, ರಮೇಶ್ ಹೆಗ್ಡೆ, ರೂಪಾ.ಡಿ ಬಂಗೇರ, ವಿಜಯ್ ಕುಮಾರ್ ಶೆಟ್ಟಿ, ಸುರೇಂದ್ರ ಜೆ ಸಾಲ್ಯಾನ್, ಭಾಸ್ಕರ್ ಚಂದ್ರ ಶೆಟ್ಟಿ, ಕಿರಣ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here