ಕೇಂದ್ರದ ಜನನ-ಮರಣ ತಿದ್ದುಪಡಿ ಕಾಯ್ದೆ-ಮಧ್ಯಂತರ ತಡೆ ವಿಧಿಸಿದ ಕರ್ನಾಟಕ ಹೈಕೋರ್ಟ್‌

ಮಂಗಳೂರು: ಜನನ ಮರಣ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಅಧಿಕಾರವನ್ನು ಸಹಾಯಕ ಕಮಿಷನರ್ ನ್ಯಾಯಾಲಯಕ್ಕೆ ನೀಡುವ ಸೆಕ್ಷನ್ 13(3)ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಜನನ ಅಥವಾ ಮರಣ ದಿನಾಂಕ ಪರಿಶೀಲಿಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್ ಅಥವಾ ಮುನ್ಸೀಫ್ ನ್ಯಾಯಾಲಯದಿಂದ ಕಂದಾಯ ಇಲಾಖೆಗೆ ಸೇರುವ ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಕಾಯ್ದೆ 2023ರ ಸೆಕ್ಷನ್ 13(3)ನಲ್ಲಿ ಈ ಅಧಿಕಾರ ನೀಡಲಾಗಿತ್ತು. ಈ ಸೆಕ್ಷನ್‌ ಅನ್ನು ಆಕ್ಷೇಪ ಮಾಡಿ ಬೆಂಗಳೂರು ವಕೀಲರ ಸಂಘ ಕರ್ನಾಟಕ ಹೈಕೋರ್ಟ್‌ ಮುಂದೆ ಅರ್ಜಿ ಸಲ್ಲಿಸಿದ್ದು, ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿರುವುದರಿಂದ ವಿಚಾರಣೆ ಅಗತ್ಯವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಕಂದಾಯ ಇಲಾಖೆಯ ಸಹಾಯಕ ಅಧಿಕಾರಿಯವರಿಗೆ ಸಿಆರ್‌ಪಿಸಿಯ ಪ್ರಕಾರ ತನಿಖೆ ನಡೆಸುವ ನ್ಯಾಯಾಂಗ ಅಧಿಕಾರ ಇರುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಮರೆತಿದೆ ಎಂಬುದಾಗಿ ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಡಿ.ಆರ್. ರವಿಶಂಕರ್ ಮತ್ತು ಪಿ.ಪಿ. ಹೆಗ್ಡೆ ವಾದಿಸಿದರು. ಇದರಿಂದ ಸದ್ರಿ ಸೆಕ್ಷನ್ ಬಗ್ಗೆ ಗೊಂದಲ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸುವವರೆಗೆ ಅಥವಾ ಮುಂದಿನ ವಿಚಾರಣೆ ವರೆಗೆ ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಕಾಯ್ದೆ 2023ರ ಸೆಕ್ಷನ್ 13(3) ತಡೆಯಾಜ್ಞೆ ನೀಡಲಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಸಿಆರ್‌ಪಿಸಿಯ ಚಾಪ್ಟರ್ 10 ಮತ್ತು 11ರಲ್ಲಿ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್‌ ರವರಿಗೆ ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವುದಕ್ಕೆ ಸಂಬಂಧಿಸಿದ ಅಧಿಕಾರ ಮಾತ್ರ ನೀಡಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

LEAVE A REPLY

Please enter your comment!
Please enter your name here