ಮಂಗಳೂರು (ಬೆಂಗಳೂರು): ರಾಜ್ಯದ ಎಲ್ಲಾ ಶಾಸಕರಿಗೆ ಗಂಡಭೇರುಂಡ ಲಾಂಛನವಿರುವ ತಲಾ ಮೂರು ಬ್ಯಾಡ್ಜ್‌ಗಳನ್ನು ವಿತರಿಸಲು ವಿಧಾನಸಭೆ ಸಚಿವಾಲಯ ನಿರ್ಧರಿಸಿದೆ.
ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಪ್ರಮುಖರ ಜತೆ ಚರ್ಚಿಸಿದ ಬಳಿಕ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಈ ತೀರ್ಮಾನ ಕೈಗೊಂಡಿದ್ದಾರೆ. ಶಾಸಕರ ಬೇಡಿಕೆಯಂತೆ ತಲಾ ಮೂರು ಬ್ಯಾಡ್ಜ್ ವಿತರಿಸಲು ತೀರ್ಮಾನಿಸಲಾಗಿದೆ.ಬೆಂಗಳೂರಿನ ಐ ಡ್ರೀಮ್ಸ್ ಟ್ರೇಡ್ ಆ್ಯಂಡ್ ಈವೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಪ್ರತಿ ಬ್ಯಾಡ್ಜ್‌ಗೆ ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ ₹ 2,832ರ ದರದಲ್ಲಿ ಬ್ಯಾಡ್ಜ್‌ಗಳನ್ನು ಖರೀದಿಸಲಾಗುತ್ತಿದೆ. ₹19.03 ಲಕ್ಷ ವೆಚ್ಚದಲ್ಲಿ ಬ್ಯಾಡ್ಜ್‌ಗಳನ್ನು ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ ಸೆಕ್ಷನ್ 4–ಜಿ ಅಡಿ ವಿನಾಯ್ತಿ ನೀಡಿ ಆರ್ಥಿಕ ಇಲಾಖೆ ಅ.30ರಂದು ಆದೇಶ ಹೊರಡಿಸಿದೆ.
‘ಆಸ್ಟ್ರೇಲಿಯಾದ ಮೇಯರ್ ಒಬ್ಬರನ್ನು ಇತ್ತೀಚೆಗೆ ಭೇಟಿಮಾಡಿದ್ದೆ. ಅವರು ಸರ್ಕಾರದ ಲಾಂಛನವುಳ್ಳ ಬ್ಯಾಡ್ಜ್ ಅನ್ನು ನನಗೆ ಉಡುಗೊರೆಯಾಗಿ ನೀಡಿದ್ದರು. ಅಲ್ಲಿನ ಚುನಾಯಿತ ಪ್ರತಿನಿಧಿಗಳು ಗೌರವ ಸೂಚಕವಾಗಿ ಸರ್ಕಾರದ ಲಾಂಛನವುಳ್ಳ ಬ್ಯಾಡ್ಜ್ ಧರಿಸುವ ವಿಷಯ ತಿಳಿಸಿದ್ದರು. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಶಾಸಕರಿಗೆ ಸರ್ಕಾರದ ಅಧಿಕೃತ ಲಾಂಛನವುಳ್ಳ ಬ್ಯಾಡ್ಜ್ ವಿತರಿಸಲು ತೀರ್ಮಾನಿಸಲಾಗಿದೆ’ ಎಂದು ಖಾದರ್ ತಿಳಿಸಿದ್ದಾರೆ. ಶಾಸಕರು, ಗಣ್ಯರು, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ವಿಧಾನಸಭೆ ಸಚಿವಾಲಯದಿಂದ ಸರ್ಕಾರದ ಲಾಂಛನವುಳ್ಳ ಡೈರಿ, ಪೆನ್, ಸ್ಟೀಲ್ ನೀರಿನ ಬಾಟಲಿ, ವಿಸಿಟಿಂಗ್ ಕಾರ್ಡ್ ಹೋಲ್ಡರ್ ಮತ್ತು ಕೀ ಚೈನ್ ವಿತರಣೆಗೆ ಸಿದ್ಧತೆ ನಡೆದಿದೆ.
ಈ ಎಲ್ಲಾ ವಸ್ತುಗಳನ್ನು ಒಳಗೊಂಡ 1,000 ಉಡುಗೊರೆ ಬಾಕ್ಸ್‌ಗಳನ್ನು ತಲಾ ₹ 1,947ರ ದರದಲ್ಲಿ ಮಂಗಳೂರಿನ ಉಳ್ಳಾಲದ ಬಿ.ಕೆ. ಸಪ್ಲೈಯರ್ಸ್ ಸಂಸ್ಥೆಯಿಂದ ಖರೀದಿಸಲಾಗುತ್ತಿದೆ. ಇದಕ್ಕಾಗಿ ₹ 19.47 ಲಕ್ಷ ವ್ಯಯಿಸಲು ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4–ಜಿ ಅಡಿಯಲ್ಲಿ ವಿನಾಯ್ತಿ ನೀಡಲಾಗಿದೆ. ಅಧಿವೇಶನದ ಅವಧಿಯಲ್ಲಿ ದಿನದಲ್ಲಿ ಮೊದಲಿಗರಾಗಿ ಸದನ ಪ್ರವೇಶಿಸುವ ಶಾಸಕರಿಗೆ ಬಹುಮಾನದ ರೂಪದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕೃತ ಲಾಂಛನಗಳನ್ನು ಅಚ್ಚು ಹಾಕಿಸಿದ ಕಪ್ ಮತ್ತು ಸಾಸರ್ ನೀಡಲು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ನಿರ್ಧರಿಸಿದ್ದಾರೆ. ‘ವಿಧಾನಸಭೆಯ ಕಳೆದ ಅಧಿವೇಶನದಲ್ಲಿ ಬಹುಮಾನದ ವಿಚಾರ ಪ್ರಕಟಿಸಿದ್ದೆ. ಕೆಲವು ಶಾಸಕರಿಗೆ 15,12 ಹೀಗೆ ಹಲವು ಬಹುಮಾನ ವಿತರಿಸಬೇಕಿದೆ. ರಾಜಭವನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಲಾಂಛನವನ್ನು ಅಚ್ಚು ಹಾಕಿಸಿರುವ ವಿಶೇಷ ಕಪ್ ಸಾಸರ್‌ಗಳನ್ನು ನೋಡಿದ ಬಳಿಕ ಅದೇ ಮಾದರಿಯ ಬಹುಮಾನ ನೀಡಲು ನಿರ್ಧರಿಸಿದೆ’ ಎಂದು ಅವರು ತಿಳಿಸಿದ್ದಾರೆ.