



ಮಂಗಳೂರು (ಉಡುಪಿ): ಪೊಲೀಸರು ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ನೂರ್ ಮುಹಮ್ಮದ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಉಡುಪಿ ನೇಜಾರು ಪ್ರಕರಣ ನಡೆದ ಮನೆ ಯಜಮಾನ, ಪೊಲೀಸ್ ತನಿಖೆಗೆ ನಾನು ದಿನದ 24 ಗಂಟೆಗಳ ಕಾಲವೂ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ಪ್ರಕರಣದ ತನಿಖಾಧಿಕಾರಿಗಳಿಗೆ ನನ್ನ ಬಳಿ ಇರುವ ಎಲ್ಲಾ ಮಾಹಿತಿಗಳನ್ನು ನೀಡಿದ್ದೇನೆ. ನನ್ನ ಮತ್ತು ಮಕ್ಕಳ ನಾಲ್ಕು ಮೊಬೈಲ್‌ಗಳನ್ನು ಪೊಲೀಸರಿಗೆ ಒಪ್ಪಿಸಿದ್ದೇನೆ ಎಂದು ಹೇಳಿದ್ದಾರೆ.







ಕೊಲೆಗೆ ಕೌಟುಂಬಿಕ ಕಲಹ ಕಾರಣ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಂದಿದ್ದು, ಅದನ್ನು ಕೇಳಿ ನನಗೆ ಆಘಾತವಾಗಿದೆ. ಈ ಸುದ್ದಿಯಲ್ಲಿ ಯಾವುದೇ ರೀತಿಯ ಸತ್ಯಾಂಶ ಇಲ್ಲ ಎಂದು ನೂರ್ ಮುಹಮ್ಮದ್ ಹೇಳಿದ್ದಾರೆ. ನನ್ನ ಮದುವೆ ನಡೆದು 30 ವರ್ಷಗಳಾಗಿವೆ. 15 ವರ್ಷಗಳ ಕಾಲ ನನ್ನ ಪತ್ನಿ ಮತ್ತು ಮಕ್ಕಳು ನನ್ನ ಜೊತೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿದ್ದರು. ಕಳೆದ ರಂಝಾನ್ ಹಬ್ಬದ ಬಳಿಕ ನಾವೆಲ್ಲ ಊರಿಗೆ ಬಂದಿದ್ದೇವೆ. ಮತ್ತೆ 15 ದಿನಗಳಲ್ಲಿ ಅವರು ವಾಪಾಸ್ಸು ಸೌದಿಗೆ ಬರಲು ಸಿದ್ಧರಾಗಿದ್ದರು. ಈ ದುರ್ಘಟನೆ ನಡೆದಿರುವುದರಿಂದ ನಾನು ತುರ್ತಾಗಿ ಬರುವಂತಾಯಿತು ಎಂದು ಅವರು ತಿಳಿಸಿದ್ದಾರೆ.



ನನ್ನ ಮಗಳು ಐನಾಝ್ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದು, ಬೆಳಗ್ಗೆ 11 ಗಂಟೆಗೆ ಅವಳು ದುಬೈಗೆ ಹೋಗಬೇಕಾಗಿತ್ತು. ಸೌದಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನನ್ನ ದೊಡ್ಡ ಮಗಳು ಮಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಳು. ಒಂದು ವರ್ಷದ ಶಿಕ್ಷಣ ಮುಗಿದ ಬಳಿಕ ಮತ್ತೆ ಸೌದಿಗೆ ಹೋಗುವ ಯೋಜನೆ ಅವಳಿಗೆ ಇತ್ತು. ಮುಂದಿನ ವರ್ಷ ಮನೆಗೆ ಪೈಂಟ್ ಮಾಡಿ ದೊಡ್ಡ ಮಗ ಮತ್ತು ಮಗಳಿಗೆ ಮದುವೆ ಮಾಡುವ ಯೋಜನೆ ಕೂಡ ಇತ್ತು ಎಂದು ಅವರು ತಿಳಿಸಿದ್ದಾರೆ.
ಮನೆಯ ಸುತ್ತಮುತ್ತಲಿನ ಜನ ಭಯ ಭೀತರಾಗಿದ್ದಾರೆ. ನನ್ನ ಮಗನನ್ನು ಹೊರಗಡೆ ಕಳುಹಿಸಲು ಹೆದರಿಕೆಯಾಗುತ್ತಿದೆ. ನಮ್ಮ ಹಿಂದೆ, ನಮ್ಮ ಸುತ್ತಮುತ್ತ ಯಾರಿದ್ದಾರೆ ನಮಗೆ ಗೊತ್ತಿಲ್ಲ ಎಂದು ನೂರ್ ಮಹಮ್ಮದ್ ಆತಂಕ ವ್ಯಕ್ತಪಡಿಸಿದ್ದಾರೆ. 












