ಪುತ್ತೂರು: ಹಳೆಯ ವಾಹನಗಳಿಗೆ ‘ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್’ ಅಳವಡಿಕೆಗೆ ಫೆ.17 2024ರವರೆಗೆ ಸಾರಿಗೆ ಇಲಾಖೆ ಅವಕಾಶ ನೀಡಿದೆ. ಈ ಮೊದಲು 2023ರ ನ.17 ಕೊನೆಯ ದಿನವಾಗಿತ್ತು. ಈ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದ್ದು, ವಾಹನ ಮಾಲೀಕರು ಯಾವುದೇ ತರಾತುರಿಯಿಲ್ಲದೇ ಎಚ್‌ಎಸ್‌ಆರ್‌ಪಿ ಫಲಕವನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬಹುದಾಗಿದೆ.
2019ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾಗಿರುವ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲಾ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿಕೆ ನೀಡಿ, ಹೆಚ್‌ಎಸ್‌ಆರ್‌ಪಿ ಅಳವಡಿಕೆ ಕಾರ್ಯ ರಾಜ್ಯದಲ್ಲಿ ನಡೆಯುತ್ತಿದೆ. ಕೆಲವರು ಕೋರ್ಟ್‌ಗೆ ತೆರಳಿದ ಕಾರಣ ವಿಳಂಬವಾಗಿದೆ. ಈ ಪ್ರಕರಣ ಇನ್ನೂ ಕೋರ್ಟ್‌ನಲ್ಲಿದೆ. ವಾಹನ ಮಾಲೀಕರ ಹಿತದೃಷ್ಟಿಯಿಂದ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಿಸಲಾಗಿದ್ದು, ದಂಡ ಶುಲ್ಕವಿಲ್ಲದೆ ವಾಹನ ಮಾಲೀಕರು ಫಲಕ ಅಳವಡಿಸಿಕೊಳ್ಳಬಹುದಾಗಿದೆ ಎಂದರು.