ಮಂಗಳೂರು(ಬೆಂಗಳೂರು): ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಹಗರಣದಲ್ಲಿ ಬಂಧನಕ್ಕೊಳಗಾಗಿ ನಾಲ್ಕು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಸಿಪಿಐ ಮುದ್ದುರಾಜ್ ನೇತೃತ್ವದ ತಂಡ ಮತ್ತೆ ಬಂಧಿಸಿದೆ.
ಎರಡನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಮತ್ತೆ ಬಂಧನವಾಗಿದೆ. ದಾವಣಗೆರೆ ವಿರಕ್ತ ಮಠದಲ್ಲಿದಲ್ಲಿದ್ದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ನ.20ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ ಚಿತ್ರದುರ್ಗಕ್ಕೆ ಕರೆದೊಯ್ದಿದ್ದಾರೆ. ನ.16ರಂದು ಪೋಕ್ಸೊ ಮೊದಲನೇ ಪ್ರಕರಣದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಜಾಮೀನು ಪಡೆದು ಬಿಡುಗಡೆಯಾಗಿದ್ದ ಇವರನ್ನು ಇನ್ನೊಂದು ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆಯೋ ಮುನ್ನವೇ ಬಿಡುಗಡೆಗೊಂಡ ಕಾರಣ 4 ದಿನಗಳಲ್ಲೇ ಮತ್ತೆ ಬಂಧಿಸಲಾಗಿದೆ.
ಬಿಡುಗಡೆಯಾದ ಮೇಲೆ ಎರಡನೇ ಪೋಕ್ಸೊ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರೂ, ಆದೇಶವನ್ನು ಪಾಲಿಸದೇ ವೀಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಿದ್ದರು. ಇದನ್ನು ಸರ್ಕಾರಿ ವಕೀಲರು ಪ್ರಶ್ನೆ ಮಾಡಿ, ಆದೇಶ ಉಲ್ಲಂಘನೆ ಮಾಡಿದ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದರು. ಮೊದಲ ಪ್ರಕರಣಕ್ಕೆ ಸಂಬಂಧಪಟ್ಟಂತೆ, ವಿಚಾರಣೆಗೆ ಹಾಜರಾಗುವುದು, ಸಾಕ್ಷ್ಯ ನಾಶ ಮಾಡದಿರುವುದು, ಜಾಮೀನು ಪಡೆಯುವ ಮೊದಲು ಇಬ್ಬರ ಶ್ಯೂರಿಟಿ, ವಿದೇಶಕ್ಕೆ ಹೋಗದಂತೆ ಪಾಸ್ ಪೋರ್ಟ್ ಸರೆಂಡರ್ ಮಾಡುವುದು, 2 ಲಕ್ಷ ರೂಪಾಯಿಯ ಜಾಮೀನು ಬಾಂಡ್ ನೀಡುವುದು, ಈ ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಜಾಮೀನು ನೀಡಿ, ಬಿಡುಗಡೆ ಮಾಡಿತ್ತು. ಸ್ವಾಮೀಜಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎನ್ನಲಾಗಿದೆ.