ಮೋದಿ ಭದ್ರತೆಗಾಗಿ ತೆರಳುತ್ತಿದ್ದ ಪೊಲೀಸ್ ಕಾರು ಅಪಘಾತ – ಓರ್ವ ಪೊಲೀಸ್‌ ಅಧಿಕಾರಿ ಮತ್ತು 5 ಪೊಲೀಸರ ದಾರುಣ ಸಾವು

ಮಂಗಳೂರು(ಜೈಪುರ): ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಗಾಗಿ ನಿಯೋಜನೆಗೊಂಡಿದ್ದ 5 ಪೊಲೀಸರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚುರು ಜಿಲ್ಲೆಯ ಕನೋಟ ಪೊಲೀಸ್‌ ಪೋಸ್ಟ್‌ ಪ್ರದೇಶದಲ್ಲಿ ಟ್ರಕ್‌ಗೆ ಪೊಲೀಸರಿದ್ದ ಎಸ್‌ಯುವಿ ವಾಹನ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ 5 ಪೊಲೀಸರು ಮೃತಪಟ್ಟರೆ, ಇಬ್ಬರು ಪೊಲೀಸ್‌ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಾಗೌರ್‌ ಜಿಲ್ಲೆಯ ಝುಂಝುನುದಲ್ಲಿ ನ.19ರಂದು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿ ಆಯೋಜನೆಗೊಂಡಿತ್ತು. ಇದಕ್ಕಾಗಿ ಪೊಲೀಸರನ್ನು ವಿಐಪಿ ಡ್ಯೂಟಿಗೆ ನಿಯೋಜಿಸಲಾಗಿತ್ತು. ಪೊಲೀಸರು ನ.19ರ ಬೆಳಗಿನ ಜಾವ ಮಹೀಂದ್ರಾ ಝೈಲೋ ಕಾರಿನಲ್ಲಿ ನಾಗೌರ್‌ನಿಂದ ಝುಂಝುನುಗೆ ತೆರಳುತ್ತಿದ್ದರು. ಮಂಜು ಮುಸುಕಿದ ವಾತಾವರಣ ಇದ್ದ ಕಾರಣ ಪೊಲೀಸರಿದ್ದ ಕಾರು ಟ್ರಕ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸುತ್ತಲೇ ಐವರು ಪೊಲೀಸರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಒಬ್ಬ ಪೊಲೀಸ್‌ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತಪಟ್ಟವರನ್ನು ರಾಮಚಂದ್ರ (56), ಸುಖರಾಮ್‌ (38), ಕುಂಭಾರಮ್‌ (35), ಧನರಾಮ್‌ (33), ಸುರೇಶ್‌ (35) ಹಾಗೂ ಮಹೇಂದ್ರ (51) ಎಂದು ಗುರುತಿಸಲಾಗಿದೆ. ಪೊಲೀಸ್‌ ಅಧಿಕಾರಿ ಸುಖರಾಮ್‌ ಖೋಜಾ ತೀರ್ವವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here