ಮಂಗಳೂರು(ಕೋಟ): ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆ ಬೀಚ್ ಸಮೀಪದ ರೆಸಾರ್ಟ್ ಕಾಂಪೌಂಡಿನ ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು ಕೋಟತಟ್ಟು ಪಡುಕರೆಯ ಸುಧೀರ್ ಕೋಟ್ಯಾನ್ ಹಾಗೂ ಶಾರದಾರವರ ಪುತ್ರ ಸುಶಾಂತ್ (3) ಎನ್ನುವ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಕೋಟತಟ್ಟು ಪಡುಕೆರೆಯ ಬೀಚ್ ಸಮೀಪ ಇರುವ ಪೃಥ್ವಿರಾಜ್ ರವರಿಗೆ ಸೇರಿದ ರೆಸಾರ್ಟ್ ಎದುರಿನ ಗೇಟ್ ಬಳಿ ಸಂಜೆ ಪಕ್ಕದ ಮನೆಯ ಹುಡುಗನ ಜೊತೆ ಆಟವಾಡುತ್ತಿದ್ದ ಮೂರು ವರ್ಷದ ಸುಶಾಂತ್ ಮೇಲೆ ಆಕಸ್ಮಿಕವಾಗಿ ಸ್ಲೈಡಿಂಗ್ ಗೇಟ್ ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಮಗುವಿನ ತಂದೆ ಕೋಟ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಷ್ಟರಲ್ಲಿಯೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ರೆಸಾರ್ಟ್ ಮಾಲೀಕ ಕಬ್ಬಿಣದ ಗೇಟನ್ನು ಸರಿಯಾಗಿ ಜೋಡಣೆ ಮಾಡದೇ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿಯಿಂದ ಈ ದುರ್ಘಟನೆ ನಡೆದಿದೆ ಎಂದು ಸುಶಾಂತ್ ಪೋಷಕರು ಆರೋಪಿಸಿದ್ದಾರೆ. ಕೋಟ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.