ಮಂಗಳೂರು(ಬೆಂಗಳೂರು): ನಗರದಲ್ಲಿ ಇನ್’ಫ್ಲ್ಯೂಯೆಂಜಾ, ವೈರಲ್ ನ್ಯುಮೋನಿಯಾ, ಉಸಿರಾಟ ಸಮಸ್ಯೆ ಹಾಗೂ ಡೆಂಘಿ ಜ್ವರಗಳಿಂದಾಗಿ ಬೆಂಗಳೂರಿನ ಸರಕಾರಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳು ಬಹುತೇಕ ಭರ್ತಿಯಾಗಿವೆ. ಡಿಸೆಂಬರ್ ತಿಂಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಎಚ್ಚರವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇನ್’ಫ್ಲ್ಯೂಯೆಂಜಾ, ವೈರಾಣು ಜ್ವರ ಹಾಗೂ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲು ನೆಗಡಿ, ಕೆಮ್ಮು, ಜ್ವರದಿಂದ ಶುರುವಾಗಿ ನಂತರ ನ್ಯೂಮೋನಿಯಾಗಿ ಬದಲಾಗುತ್ತಿವೆ. ಈ ಸಮಸ್ಯೆ ಮಕ್ಕಳು ಹಾಗೂ ವಯೋವೃದ್ಧರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಮಕ್ಕಳಿಗೆ ನೆಗಡಿ ಅಥವಾ ಕೆಮ್ಮು ಶುರುವಾದರೆ ಶಾಲೆಗೆ ಕಳುಹಿಸದೆ ಚಿಕಿತ್ಸೆ ಕೊಡಿಸಬೇಕು. ನೆಗಡಿ, ಕೆಮ್ಮು ಬಂದವರು ಎಲ್ಲೆಂದರಲ್ಲಿ ಉಗುಳಬಾರದು. ಕೆಮ್ಮುವಾಗ ಕೈ ಹಿಡಿದು ಕೆಮ್ಮಬೇಕು. ಮಕ್ಕಳನ್ನು ಮುಟ್ಟುವಾಗ ಕೈ ತೊಳೆಯುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಮಕ್ಕಳಿಗೆ ಮೈ ಸ್ವಲ್ಪ ಬೆಚ್ಚಗಿದ್ದರೂ ಆಸ್ಪತ್ರೆಗೆ ಕರೆ ತರಬೇಕು. ಆಗ ಅಪಾಯದಿಂದ ಪಾರು ಮಾಡಬಹುದು ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.