ಮಂಗಳೂರು(ಉತ್ತರಕಾಶಿ): ಭಾರತದಲ್ಲಿ ನಡೆದ ಚಾರಿತ್ರಿಕ ಕಾರ್ಯಾಚರಣೆ ಎನ್ನಲಾದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ–ಬಡಕೋಟ್ ಸುರಂಗದಲ್ಲಿ ಸಿಲುಕಿದ್ದ 41 ಮಂದಿ ಕಾರ್ಮಿಕರನ್ನು ರಕ್ಷಿಸಲು 17 ದಿನಗಳಿಂದ ನಡೆದಿದ್ದ ಪ್ರಯತ್ನಕ್ಕೆ ಕೊನೆಗೂ ಜಯ ಸಿಕ್ಕಿದೆ. 41 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರುವಲ್ಲಿ ರಕ್ಷಣಾ ಸಿಬ್ಬಂದಿ ನ.28ರ ರಾತ್ರಿ ಯಶಸ್ಸು ಕಂಡಿದ್ದಾರೆ.
ಭಾರತೀಯ ಸೇನೆ ಸೇರಿದಂತೆ ಹಲವು ಏಜೆನ್ಸಿಗಳು ಭಾಗಿಯಾಗಿದ್ದ ರಕ್ಷಣಾ ಕಾರ್ಯಾಚರಣೆಗೆ ಮತ್ತೆ ಮತ್ತೆ ಅಡ್ಡಿಗಳು ಎದುರಾಗಿತ್ತು. ಸುರಂಗದಲ್ಲಿ ಸಿಲುಕಿ, 17 ದಿನಗಳಿಂದ ಹೊರಜಗತ್ತನ್ನೇ ಕಾಣದಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ ಎಂಬ ಸುದ್ದಿ ಬಿತ್ತರವಾದ ನಂತರದಲ್ಲಿ ದೇಶವಾಸಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಸ ಹಂಚಿಕೊಂಡರು. ವಿಜ್ಞಾನ, ನಂಬಿಕೆ, ಪ್ರಾರ್ಥನೆ, ತಾಂತ್ರಿಕ ಪರಿಣತಿ ಹಾಗೂ ಶ್ರಮದ ಸಂಗಮಕ್ಕೆ ಸಿಕ್ಕ ಯಶಸ್ಸು ಇದು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕವಾಗಿ ಸಂತಸ ಹಂಚಿಕೊಂಡಿದ್ದಾರೆ.
ಸುರಂಗದಿಂದ ಸುರಕ್ಷಿತವಾಗಿ ಹೊರಗೆ ಕರೆತರಲು ಅಳವಡಿಸಿದ್ದ 60 ಮೀಟರ್ ಉದ್ದದ ಪೈಪ್ ಮೂಲಕ ಕಾರ್ಮಿಕರು ಹೊರಬರುತ್ತಿದ್ದಂತೆಯೇ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರು, ಕಾರ್ಮಿಕರನ್ನು ಸ್ವಾಗತಿಸಿದರು. ಎನ್‌ಡಿಆರ್‌ಎಫ್ ಸಿಬ್ಬಂದಿ ಈ ಕಾರ್ಮಿಕರನ್ನು ಸುರಂಗದಿಂದ ಹೊರಗೆ ಕರೆತಂದರು. ಭಾರಿ ಯಂತ್ರಗಳ ನೆರವಿಲ್ಲದೆಯೇ ಸುರಂಗ ಕೊರೆಯುವ ನಿಪುಣರ ತಂಡವು, ಸುರಂಗ ಕೊರೆಯುವ ಕೆಲಸವನ್ನು ಪೂರ್ಣಗೊಳಿಸಿದ ಸರಿಸುಮಾರು ಒಂದು ಗಂಟೆಯ ನಂತರದಲ್ಲಿ, ಕಾರ್ಮಿಕರನ್ನು ಹೊರಗೆ ತರಲಾಯಿತು. ಕಾರ್ಮಿಕರು ಹೊರಬರುತ್ತಿದ್ದಂತೆ, ಕೆಲವರು ಸಂತಸದಿಂದ ‘ಹರ ಹರ ಮಹಾದೇವ’ ಎಂದು, ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದರು. ಸುರಂಗದ ಹೊರಬಂದ ಕಾರ್ಮಿಕರನ್ನು ಆಂಬುಲೆನ್ಸ್ ಮೂಲಕ ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು.
ಪ್ರಧಾನಿ ಸಂತಸ:
ಈ ರಕ್ಷಣಾ ಕಾರ್ಯವು ಎಲ್ಲರನ್ನೂ ಭಾವುಕವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಕಾರ್ಮಿಕರನ್ನು ಹೊರಗೆ ಕರೆತಂದ ನಂತರದಲ್ಲಿ ಎಕ್ಸ್ ಮೂಲಕ ಸಂತಸ ಹಂಚಿಕೊಂಡಿರುವ ಮೋದಿ, ‘ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವರ ಧೈರ್ಯ ಮತ್ತು ದೃಢನಿಶ್ಚಯವು ಕಾರ್ಮಿಕರಿಗೆ ಹೊಸ ಜೀವನ ನೀಡಿದೆ’ ಎಂದು ಹೇಳಿದ್ದಾರೆ. ‘ಈ ಕಾರ್ಯದಲ್ಲಿ ತೊಡಗಿದ್ದ ಎಲ್ಲರೂ ಮಾನವೀಯತೆ ಹಾಗೂ ಒಂದು ತಂಡವಾಗಿ ಕೆಲಸ ಮಾಡುವುದಕ್ಕೆ ಅದ್ಭುತವಾದ ಉದಾಹರಣೆಯೊಂದನ್ನು ಸೃಷ್ಟಿಸಿಕೊಟ್ಟಿದ್ದಾರೆ’ ಎಂದು ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಫೂರ್ತಿದಾಯಕ ಎಂದಿದ್ದಾರೆ.
ಎಲ್ಲಾ 41 ಕಾರ್ಮಿಕರಿಗೆ ಉತ್ತರಾಖಂಡ ಸಿ.ಎಂ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.