ಮಂಗಳೂರು: ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮೀಫ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡ ಹಿನ್ನಲೆಯಲ್ಲಿ, ಸಂಸ್ಥೆಯ ಪದಾಧಿಕಾರಿಗಳಿಗೆ, ಹಿತೈಷಿಗಳಿಗೆ, ಮೀಫ್ ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್ ಮುಖ್ಯಸ್ಥರುಗಳಿಗೆ, ಆಡಳಿತ ಮಂಡಳಿ ಸದಸ್ಯರುಗಳಿಗೆ ಮತ್ತು ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕಾರ ನೀಡಿದವರಿಗೆ ಕೃತಜ್ಞತೆ ಸಮರ್ಪಣೆಯ ಸಂತೋಷ ಕೂಟ, “ಸ್ನೇಹ ಸಮ್ಮಿಲನ” ಮಂಗಳೂರಿನ ಜಮೀಯತುಲ್ ಫಲಾಹ್ ಸಭಾಭವನದಲ್ಲಿ ಜರಗಿತು.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಮೀಫ್ ಸುಧೀರ್ಘ ಪಯಣದಲ್ಲಿ ಸಹಕರಿಸಿದ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳನ್ನು ಮತ್ತು ವ್ಯಕ್ತಿಗಳನ್ನು ಸನ್ಮಾನಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಾಗ ಪ್ರಶಸ್ತಿ ಪುರಸ್ಕಾರಗಳು ತಾನಾಗಿಯೇ ಬರುತ್ತದೆ ಎಂಬುದಕ್ಕೆ ಮೀಫ್ ಉದಾಹರಣೆ. ಯಾವುದೇ ಸಂಸ್ಥೆ ಕಟ್ಟಿ ಬೆಳೆಸಿದವರನ್ನು ಪ್ರೋತ್ಸಾಹ ನೀಡಿದವರನ್ನು ಗೌರವಿಸುವುದು ಉತ್ತಮ ಮಾದರಿ ಕಾರ್ಯ ಎಂದರು.
ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಉಮ್ಮರ್ ಟಿ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಪ್ರತಿಷ್ಠಿತ ಪ್ರೆಸಿಡೆನ್ಸಿ ಯೂನಿವರ್ಸಿಟಿ ನಿರ್ದೇಶಕಿ ನಫೀಸಾ ಅಹಮದ್ ಮಾತನಾಡಿ ಶಿಕ್ಷಣದಿಂದ ಯಾವುದೇ ಸಮುದಾಯದ ಅಭಿವೃದ್ಧಿ ಸಾಧ್ಯ. ಪ್ರತಿಪಲಾಪೇಕ್ಷೆ ಇಲ್ಲದೆ ಮೀಫ್ ಶೈಕ್ಷಣಿಕ ಸೇವೆ ಅವಿಸ್ಮರಣೀಯ ಎಂದರು. ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ. ಎ. ಬಾವ, ಉದ್ಯಮಿ ಬಿ.ಎಂ. ಮುಷ್ತಾಕ್, ಜಮೀಯತುಲ್ ಫಲಾಹ್ ಅಧ್ಯಕ್ಷ ಕೆ. ಕೆ.ಶಾಹುಲ್ ಹಮೀದ್ ಶುಭ ಹಾರೈಸಿದರು.
ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫಾ ಸುಳ್ಯಕ್ಕೆ ಸಂಬಂಧಪಟ್ಟ ಬೇಡಿಕೆಗಳ ಮನವಿಯನ್ನು ಸ್ಪೀಕರ್ ರವರಿಗೆ ಅರ್ಪಿಸಿದರು. ಉಪಾಧ್ಯಕ್ಷ ಮಮ್ತಾಜ್ ಅಲಿ ಕೃಷ್ಣಾಪುರ ಮೀಫ್ ಸ್ಥಾಪಕರನ್ನು ಸ್ಮರಿಸಿದರು. ಕಾರ್ಯದರ್ಶಿ ರಿಯಾಝ್ ಕಣ್ಣೂರು ಪ್ರಾಯೋಜಕತ್ವ ನೀಡಿದ ಸಂಘ ಸಂಸ್ಥೆಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ಶಾಬಿಹ್ ಅಹಮದ್ ಖಾಜಿ ಉಡುಪಿ ವಂದಿಸಿದರು. ಖಜಾಂಚಿ ನಿಸಾರ್ ಮಹಮ್ಮದ್, ಪ್ರೋಗ್ರಾಂ ಸೆಕ್ರೆಟರಿ ಮಹಮ್ಮದ್ ಶಾರಿಕ್, ಮೀಡಿಯಾ ಸೆಕ್ರೆಟರಿ ಇಲ್ಯಾಸ್ ಪಣಂಬೂರು, ಮೊದಲಾದವರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಅಂಜುಮನ್ ಜೋಕಟ್ಟೆ, ಯೆನೆಪೋಯ ಸ್ಕೂಲ್ ಜೆಪ್ಪಿನಮೋಗರು, ಪ್ರೆಸಿಡೆನ್ಸಿ ಯೂನಿವರ್ಸಿಟಿ ಬೆಂಗಳೂರು, ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಅಡ್ಯಾರ್, ಜಾಮ್ವಾ ಅಸೋಸಿಯೇಷನ್ ಕೆ.ಎ.ಎಸ್. ಜಮ್ಮೀಯತುಲ್ ಫಲಾಹ್, ಪ್ರೊ ರಾಜೇಂದ್ರ ಭಟ್ ಮೊದಲಾದವರಿಗೆ ಗೌರವಾರ್ಪಣೆ ಮಾಡಲಾಯಿತು.