



ಮಂಗಳೂರು: ಮಂಗಳೂರು ಪ್ರೆಸ್ಕ್ಲಬ್ ವತಿಯಿಂದ ನ.29ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಚಾರ್ಮಾಡಿ ಹಸನಬ್ಬ ಅವರಿಗೆ ‘ಪ್ರೆಸ್ಕ್ಲಬ್ ಗೌರವ ನೀಡಲಾಯಿತು. ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಹಸನಬ್ಬ, ಅಪಘಾತವಾದಾಗ ಗಾಯಾಳುವಿನ ಜೀವ ಉಳಿಸಲು ನನ್ನ ಪ್ರಥಮ ಆದ್ಯತೆ. ಅದು ನನ್ನ ಮನಸ್ಸಿಗೆ ಸಮಾಧಾನ ನೀಡುವ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ನನ್ನಿಂದಾದ ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಈ ಕಾರ್ಯವನ್ನು ನೆನಪಿಟ್ಟು, ಮತ್ತೆ ಬಂದು ನನಗೆ ಕೃತಜ್ಞತೆ ಹೇಳುವಾಗ ನನ್ನ ಕಾರ್ಯ ಸಾರ್ಥಕ ಅನ್ನಿಸಿದೆ. ಅದುವೇ ನನಗೆ ದೊರಕಿದ ಬಹುದೊಡ್ಡ ಸನ್ಮಾನ ಎಂದು ಹೇಳಿದರು.







ಮನುಷ್ಯನಿಗೆ ಬೇಕಿರುವುದು ಮಾನವೀಯತೆ. ಎಲ್ಲೇ ಅಪಘಾತ ನಡೆಯಲಿ, ಕೂಡಲೇ ಧಾವಿಸಿ ಗಾಯಾಳುವನ್ನು ಉಪಚರಿಸಿ ಜೀವ ಉಳಿಸುವ ಮಾನವ ಧರ್ಮ ಎಲ್ಲರಲ್ಲೂ ಮೂಡಿಬರಬೇಕು. ಅಪಘಾತ ಸಂಭವಿಸಿದ ಸಂದರ್ಭ ಗಾಯಾಳುಗಳನ್ನು ಉಪಚರಿಸಿ ಪ್ರಾಣ ಉಳಿಸುವ ಕಾರ್ಯ ಮಾಡಬೇಕೇ ಹೊರತು ಫೋಟೋ ತೆಗೆಯುವುದು, ಜಗಳ ಮಾಡುತ್ತಾ ಕೂರುವುದು ಸರಿಯಲ್ಲ ಎಂದವರು ಅಭಿಪ್ರಾಯ ಪಟ್ಟರು.



ಚಾರ್ಮಾಡಿಯಲ್ಲಿ ಶೀಘ್ರವೇ ಆ್ಯಂಬುಲೆನ್ಸ್ ಸೇವೆ
ಚಾರ್ಮಾಡಿ ಘಾಟ್ನಲ್ಲಿ ಈಗ ರಸ್ತೆ ಅಗಲೀಕರಣ, ಅಭಿವೃದ್ಧಿಯಿಂದಾಗಿ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ತುರ್ತು ಸಂದರ್ಭಗಳಲ್ಲಿ ಮುಂಜಾಗ್ರತೆಗಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸಲು ನಿರ್ಧರಿಸಿದ್ದೇನೆ. ಇದು ಚಾರ್ಮಾಡಿಯ ಸುತ್ತಲಿನ 50 ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ಸೇವೆ ನೀಡಲಿದೆ. ರಾಜ್ಯೋತ್ಸವ ಪುರಸ್ಕಾರದಲ್ಲಿ ಸರಕಾರ 5 ಲಕ್ಷ ರೂ. ಗೌರವ ಮೊತ್ತ ನೀಡಿದೆ. ಆ್ಯಂಬುಲೆನ್ಸ್ಗೆ 8 ಲಕ್ಷ ರೂ. ಬೇಕು. ಉಳಿದ ಹಣವನ್ನು ನಾವೇ ಕುಟುಂಬಸ್ಥರು ಟ್ರಸ್ಟ್ ಮಾಡಿಕೊಂಡು ಸಾಲದ ಮೂಲಕ ಭರಿಸುತ್ತೇವೆ. ನನ್ನ ಮೂವರು ಪುತ್ರರು ಇದರ ಜವಾಬ್ದಾರಿ ನಿರ್ವಹಿಸುತ್ತಾರೆ. ಬಳಿಕ ಕಂತು ಪಾವತಿಸಿ ಸಾಲ ತೀರಿಸುತ್ತೇವೆ. ಆ್ಯಂಬುಲೆನ್ಸ್ ಕೆಲವೇ ದಿನಗಳಲ್ಲಿ ಬರಲಿದೆ. ಪ್ರಸ್ತುತ ಟ್ರಸ್ಟ್ನ್ನು ನೋಂದಣಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹಸನಬ್ಬ ಹೇಳಿದ್ದಾರೆ.
ವಿ ಫೋರ್ ನ್ಯೂಸ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಕುಂದರ್ ಗೌರವ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ, ಹಸನಬ್ಬರಂತಹ ಸಾಧಕರನ್ನು ಗುರುತಿಸಿ ಸಂವಾದ ನಡೆಸುವುದು ಶ್ಲಾಘನೀಯ. ಇದು ಹಸನಬ್ಬರಿಗೆ ಮಾತ್ರವಲ್ಲ ಪ್ರೆಸ್ಕ್ಲಬ್ಗೂ ಗೌರವ ತರುತ್ತದೆ ಎಂದರು.ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿ, ಹಸನಬ್ಬರು ಮಾನವೀಯ ಸೇವೆಯ ಬಗ್ಗೆ ಪ್ರಸ್ತಾಪಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು. ಪತ್ರಕರ್ತ ಬಿ.ಎನ್.ಪುಷ್ಪರಾಜ್ ಸ್ವಾಗತಿಸಿ ನಿರೂಪಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಛಾಯಾಗ್ರಾಹಕ ಸತೀಶ್ ಇರಾ ಕಾರ್ಯಕ್ರಮ ಸಂಯೋಜಿಸಿದರು.












