ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಮೇಲ್ -‌ ಮಕ್ಕಳನ್ನು ಮನೆಗೆ ಕರೆದೊಯ್ದ ಪೋಷಕರು – ಶಾಲೆಗೆ ದೌಡಾಯಿಸಿದ ಪೊಲೀಸರು

ಮಂಗಳೂರು (ಬೆಂಗಳೂರು):ಬೆಂಗಳೂರು ನಗರದ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ ಎನ್ನುವ ಸುದ್ದಿ ಆತಂಕ ಸೃಷ್ಟಿಸಿದೆ.

ಇ-ಮೇಲ್ ಮೂಲಕ ಬಸವೇಶ್ವರನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಕಳೆದ ವರ್ಷ ಕೂಡ ಇದೇ ರೀತಿ ಒಂದೇ ದಿನ 30 ಶಾಲೆಗಳಿಗೆ ಇ-ಮೇಲ್ ಮೂಲಕ ಹುಸಿ ಬೆದರಿಕೆ ಹಾಕಲಾಗಿತ್ತು. ಆದರೆ ಈವರೆಗೂ ಬಾಂಬ್ ಬೆದರಿಕೆ ಹಾಕಿರುವ ಆರೋಪಿಯ ಬಂಧನವಾಗಿಲ್ಲ.

ಬಾಂಬ್ ಬೆದರಿಕೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಶಾಲೆಗೆ ರಜೆ ಘೋಷಿಸಿ ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಇತ್ತ ಬೆದರಿಕೆ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಶಾಲೆಯ ಬಳಿ ಓಡಿ ಬಂದು ಪರಿಶೀಲನೆ ನಡೆಸಿದ್ದಾರೆ.

ಕಿಡಿಗೇಡಿಗಳು “ನಿಮ್ಮ ಶಾಲೆಗೆ ಬಾಂಬ್ ಇಡುತ್ತೇವೆ, ಎಲ್ಲರೂ ಸಾಯಲು ಸಿದ್ದರಾಗಿ, ಎಲ್ಲರೂ ಇಸ್ಲಾಂಗೆ ಮತಾಂತರಗೊಳ್ಳಲು ತಯಾರಾಗಿರಿ, ನೀವೆಲ್ಲರೂ ಅಲ್ಲಾಹುವಿನ ವಿರೋಧಿಗಳು, ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಸಾಯಿಸುತ್ತೇವೆ ಎಂದು ಮೇಲ್‌ ನಲ್ಲಿ ಬರೆಯಲಾಗಿದೆ ಎನ್ನಲಾಗಿದೆ. ಸದ್ಯ ಪೊಲೀಸರು ರಾಜಧಾನಿಯ ಎಲ್ಲೆಡೆ ಅಲರ್ಟ್ ಘೋಷಿಸಿದ್ದಾರೆ.ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಪೋಷಕರು ಮಕ್ಕಳು ಆತಂಕ ಪಡುವ ಅಗತ್ಯವಿಲ್ಲ, ಈ ಮೇಲ್‌ ಬೆದರಿಕೆ ಪ್ರಕರಣವನ್ನು ಲಘುವಾಗಿ ಪರಿಗಣಿಸುವುದಿಲ್ಲ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್‌ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿಕೆ‌ ಶಿವಕುಮಾರ್ ಟಿವಿ ಯಲ್ಲಿ ವಿಷಯ ತಿಳಿದು ಗಾಬರಿಯಾಯಿತು. ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಇದೊಂದು ಹುಸಿ ಕರೆ ಎಂದು ಗೊತ್ತಾಗಿದೆ. ಯಾವಾಗಲಾದರೂ ನಿಜ ಬಾಂಬ್‌ ಇಡಬಹುದು, ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಕ್ಕಳು ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಹಲವಾರು ಬಾರಿ ನಗರದ ಶಾಲೆಗಳಲ್ಲಿ ಬಾಂಬ್‌ ಇಡಲಾಗಿದೆ ಎಂಬ ಕರೆ ಬಂದಿತ್ತು. ಪರಿಶೀಲನೆ ನಡೆಸಿದಾಗ ಅದು ಹುಸಿ ಕರೆ ಎಂದು ತಿಳಿದಿತ್ತು. ಇಂತಹ ಬೆದರಿಕೆ ಹಾಕಿದವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ್‌ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here