ನೈಸ್ ಸಂಸ್ಥೆಗೆ ನೀಡಿರುವ 554 ಎಕರೆ ಜಮೀನನ್ನು ಹಿಂಪಡೆಯಲು ಸರ್ಕಾರ ಬದ್ಧವಾಗಿದೆ-ಸಚಿವ ಶರಣಬಸಪ್ಪ ದರ್ಶನಾಪುರ್

ಮಂಗಳೂರು: ನೈಸ್ ಸಂಸ್ಥೆಗೆ ನೀಡಿರುವ 554 ಎಕರೆ ಜಮೀನನ್ನು ಹಿಂಪಡೆಯಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ್ ಅವರು ವಿಧಾನಪರಿಷತ್‍ ನಲ್ಲಿ ಹೇಳಿದ್ದಾರೆ.

ಬಿಜೆಪಿ ಸದಸ್ಯ ಮುನಿರಾಜೇಗೌಡ ಅವರ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪರವಾಗಿ ಉತ್ತರಿಸಿದ ಸಚಿವ ಶರಣಬಸಪ್ಪ ದರ್ಶನಾಪುರ್, ನೈಸ್ ಸಂಸ್ಥೆಯವರಿಗೆ ಹೆಚ್ಚುವರಿಯಾಗಿ 554 ಎಕರೆ ಜಮೀನನ್ನು ಹಿಂತಿರುಗಿಸಬೇಕೆಂದು ಕೆಐಎಡಿಬಿ ಮೂಲಕ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಜಮೀನು ಹಿಂಪಡೆಯುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಎಂಐಸಿ ಯೋಜನೆಗೆ ಹೆಚ್ಚುವರಿ ಜಮೀನುಗಳನ್ನು ಹಿಂಪಡೆಯುವ ಕುರಿತು ಈಗಾಗಲೇ ಜಮೀನುಗಳನ್ನು ಗುರುತಿಸಿ ಸರ್ವೆ ನಂಬರ್ ಕೂಡ ನೀಡಲಾಗಿದೆ. ಈಗಾಗಲೇ ಕಾನೂನಿನ ಪ್ರಕ್ರಿಯೆಗಳು ಪ್ರಾರಂಭವಾಗಿದೆ. ನೈಸ್ ಸಂಸ್ಥೆಯವರಿಗೆ ಜಮೀನು ಬಿಡಬೇಕು. ಅದರಿಂದ ನಮಗಾಗುವ ಉಪಯೋಗವೇನು ಎಂದು ಪ್ರಶ್ನಿಸಿದರು. ಹೆಚ್ಚುವರಿ ಭೂಮಿ ಹಿಂಪಡೆಯುವ ಬಗ್ಗೆ ಸದನ ಸಮಿತಿಯು ತನ್ನ ವರದಿಯಲ್ಲಿ ನೀಡಿರುವ ಜಮೀನಿನ ಸರ್ವೆ ನಂಬರ್ ಗಳಿಗೂ ಮತ್ತು ವಿಸ್ತೀರ್ಣಕ್ಕೂ ವ್ಯತ್ಯಾಸಗಳಿವೆ. ಇದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭೂಮಿಯನ್ನು ಹಿಂಪಡೆದ ನಂತರ ಇದನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂಬುದರ ಕುರಿತು ಪರಿಶೀಲನೆ ನಡೆಯಬೇಕಿದೆ. ಜಮೀನು ನಮ್ಮ ಕೈಗೆ ಬಂದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here