ಮಂಗಳೂರು: ಯುಕೊ ಬ್ಯಾಂಕ್ ನ 41 ಸಾವಿರಕ್ಕೂ ಅಧಿಕ ಖಾತೆದಾರರ ಖಾತೆಗೆ ಸುಮಾರು 820 ಕೋಟಿ ರೂಪಾಯಿ ತಾಂತ್ರಿಕ ದೋಷದಿಂದ ಜಮೆಯಾಗಿದೆ ಎಂದು ಬ್ಯಾಂಕ್ ತಿಳಿಸಿದ್ದು, ಈ ಸಂಬಂಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದ್ದು, ಮಂಗಳೂರು ಸೇರಿದಂತೆ 13 ಸ್ಥಳಗಳಲ್ಲಿ ಶೋಧ ನಡೆಸಿದೆ.
ಈ ಕುರಿತು ಯುಕೊ ಬ್ಯಾಂಕ್, ಸಂಶಯಾಸ್ಪದ ಐಎಂಪಿಎಸ್ ವ್ಯವಹಾರಗಳಿಗೆ ಸಂಬಂಧಿಸಿ ತನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಎಂಜಿನಿಯರ್ ಹಾಗೂ ಇತರ ಕೆಲ ಅಪರಿಚಿತರ ವಿರುದ್ಧ ದೂರು ನೀಡಿದೆ. ಈ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನ. 10 ಹಾಗೂ 13ರ ಮಧ್ಯೆ 820 ಕೋಟಿ ರೂ. ಮೊತ್ತವನ್ನು ಏಳು ಖಾಸಗಿ ಬ್ಯಾಂಕ್‌ಗಳ 14,000 ಖಾತೆದಾರರಿಂದ ಐಎಂಪಿಎಸ್ ಆಂತರಿಕ ವಹಿವಾಟುಗಳ ಮೂಲಕ ಯುಕೋ ಬ್ಯಾಂಕ್‌ನ 41,000 ಖಾತೆದಾರರಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಹುಡುಕಾಟದ ಸಮಯದಲ್ಲಿ, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗ್ಳು, ಕಂಪ್ಯೂಟರ್ ಸಿಸ್ಟಮ್‌ಗಳು, ಇಮೇಲ್ ಆರ್ಕೈವ್‌ಗಳು ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ಪುರಾವೆಗಳನ್ನು ಪಡೆಯಲಾಗಿದೆ. ಅಚಾನಕ್ ಆಗಿ ಖಾತೆಗೆ ಹಣ ಬಿದ್ದ ಕೂಡಲೇ ಕೆಲವರು ಹಣ ನಗದೀಕರಿಸಿಕೊಂಡಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಸಿಬಿಐ ತಿಳಿಸಿದೆ.