ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರೈಲು ಪ್ರಯಾಣಿಕರ ಬೇಡಿಕೆಯಂತೆ ನೈಋತ್ಯ ರೈಲ್ವೆ ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರೋಡ್ ನಡುವಿನ ರೈಲಿನ ವೇಗವನ್ನು ಹೆಚ್ಚಿಸಿದ್ದು ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ.
ಡಿ.6ರ ಬುಧವಾರದಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 06488 ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ ಪ್ರತಿದಿನ ಸಂಚರಿಸುವ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿಯನ್ನು ಕೂಡ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ಅನ್ವಯ ರೈಲು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಮಧ್ಯಾಹ್ನ 1:30ರ ಬದಲು 1:45ಕ್ಕೆ ಹೊರಡಲಿದೆ. ಬಜಕೆರೆಗೆ 1.53ಕ್ಕೆ ತಲುಪಿ 1.54ಕ್ಕೆ ಹೊರಡಲಿದೆ. ಕೋಡಿಂಬಾಳಕ್ಕೆ 2:00 ಗಂಟೆಗೆ ತಲುಪಿ 2:01ಕ್ಕೆ ಹೊರಡಲಿದೆ. ಎಡಮಂಗಲಕ್ಕೆ 2:08ಕ್ಕೆ ತಲುಪಿ 2:09ಕ್ಕೆ ಹೊರಡಲಿದೆ. ಕಾಣಿಯೂರಿಗೆ 2:18ಕ್ಕೆ ತಲುಪಿ 2:19ಕ್ಕೆ ಹೊರಡಲಿದೆ. ನರಿಮೊಗರು 2:30ಕ್ಕೆ ತಲುಪಿ 2:31ಕ್ಕೆ ಹೊರಡಲಿದೆ. ಕಬಕ ಪುತ್ತೂರು 2:45ಕ್ಕೆ ತಲುಪಿ 2:47ಕ್ಕೆ ಹೊರಡಲಿದೆ. ನೇರಳಕಟ್ಟೆಗೆ 3:01ಕ್ಕೆ ತಲುಪಿ 3:02ಕ್ಕೆ ಹೊರಡಲಿದೆ ಮತ್ತು ಬಂಟ್ವಾಳಕ್ಕೆ 3.18ಕ್ಕೆ ತಲುಪಿ 3.22ಕ್ಕೆ ಹೊರಡಲಿದೆ.
ಆದರೆ ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್ ತನಕ ರೈಲು ಸಾಗುವ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಘಾಟ್ ನಡುವಿನ 55 ಕಿ. ಮೀ. ರೈಲು ಮಾರ್ಗವನ್ನು ವಿದ್ಯುದೀಕರಣ ಗೊಳಿಸಲು ಸಮೀಕ್ಷೆ ಪೂರ್ಣಗೊಂಡಿದ್ದು, 2024ರ ಜನವರಿಯಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಬೆಂಗಳೂರು-ಮಂಗಳೂರು ನಡುವಿನ ರೈಲು ಮಾರ್ಗ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ. ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಸಂಜೆ ರೈಲನ್ನು ಸುಬ್ರಮಣ್ಯ ರೋಡ್ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಕುರಿತು ಚರ್ಚೆಗಳು ನಡೆಯುತ್ತಿದೆ. ಕಬಕ ಪುತ್ತೂರು ಮತ್ತು ಸುಬ್ರಮಣ್ಯ ರೋಡ್ ನಡುವಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳಲು ಒಂದು ತಿಂಗಳು ಬೇಕಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.