ಮಂಗಳೂರು: ನಗರದ ಕದ್ರಿ ಪಾರ್ಕ್ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಎಂಡಿಎಂಎ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮಂಜೇಶ್ವರ ಪಾವೂರು ಗ್ರಾಮದ ಮಚ್ಚಂಪಾಡಿ ನಿವಾಸಿ ನವಾಜ್(40), ಬಂಟ್ವಾಳ ಫರಂಗಿಪೇಟೆಯ ಪುದು ಗ್ರಾಮದ ಜುಮಾದಿ ಗುಡ್ಡೆ ಮನೆ ನಿವಾಸಿ ಅಜರುದ್ದೀನ್ ಯಾನೆ ಅಜರ್(38) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 120 ಗ್ರಾಂ ತೂಕದ 6,00,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮೊಬೈಲ್ ಫೋನ್ ಗಳು-3, ಡಿಜಿಟಲ್ ತೂಕ ಮಾಪನ, ಸುಝುಕಿ ಅಕ್ಸಿಸ್ ಸ್ಕೂಟರ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 6,83,120 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳ ಪೈಕಿ ನವಾಜ್ ಎಂಬಾತನ ವಿರುದ್ದ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಮತ್ತೋರ್ವ ಆರೋಪಿ ಅಜರುದ್ದೀನ್ ಎಂಬಾತನ ವಿರುದ್ದ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣ, ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಎರಡು ಕಳ್ಳತನ ಪ್ರಕರಣಗಳಂತೆ ಹೀಗೆ ಒಟ್ಟು 5 ಪ್ರಕರಣಗಳು ದಾಖಲಾಗಿವೆ.