ಮಂಗಳೂರು(ಬೆಂಗಳೂರು): ಕನ್ನಡ ಚಿತ್ರರಂಗದ ಹಿರಿಯ ನಟಿ, ನಟ ವಿನೋದ್ ರಾಜ್ ಅವರ ತಾಯಿ ಲೀಲಾವತಿ ಅವರು ಡಿ.8ರ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಲೀಲಾವತಿಯವರ ನಿಧನಕ್ಕೆ ಅಭಿಮಾನಿಗಳು, ನಟ ನಟಿಯರು, ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ನೆಲಮಂಗಲದ ಸೋಲದೇವನ ಹಳ್ಳಿಯಲ್ಲಿ ಪುತ್ರ ವಿನೋದ್ ರಾಜ್ ಜೊತೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಉಸಿರಾಟದಲ್ಲಿ ಏರುಪೇರಾಗಿದ್ದು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅಲ್ಲಿ ಅವರು ಮೃತ ಪಟ್ಟಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಲೀಲಾವತಿಯವರ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಲಿದ್ದಾರೆ. ಮಧ್ಯಾಹ್ನ 2.15ರ ಬಳಿಕ ಪಾರ್ಥಿವ ಶರೀರವನ್ನು ನೆಲಮಂಗಲದ ತೋಟದ ಮನೆಗೆ ಕೊಂಡೊಯ್ದು ಅಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಲೀಲಾವತಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಲೀಲಾವತಿಯವರ ವೈವಿಧ್ಯಮಯ ಪಾತ್ರ, ಅಧ್ಬುತ ಪ್ರತಿಭೆಯನ್ನು ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಶಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಅವರು ಬರೆದುಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ, 50 ವರ್ಷಗಳಷ್ಟು ಧೀರ್ಘಕಾಲ ಮಿನುಗಿದ ಇವರು ಕನ್ನಡ, ತಮಿಳು, ತೆಲುಗು, ತುಳು ಚಿತ್ರ ಸೇರಿದಂತೆ ಸುಮಾರು 600ರಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ದ.ಕ ಜಿಲ್ಲೆಯ ಬೆಳ್ತಂಗಡಿಯಲ್ಲಿ 1937ರಲ್ಲಿ ಜನಿಸಿದ ಲೀಲಾವತಿ ತನ್ನ 6ನೇ ವಯಸ್ಸಿಗೆ ಹೆತ್ತವರನ್ನು ಕಳೆದುಕೊಂಡರು. ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಲೀಲಾವತಿಯಾಗಿ ಗುರುತಿಸಿಕೊಂಡ ಇವರ ಜನ್ಮನಾಮ ಲೀನಾ ಸಿಕ್ವೆರಾ. ತಂದೆ ತಾಯಿಯನ್ನು ಕಳೆದುಕೊಂಡ ಬಳಿಕ ಲೀಲಾವತಿ ತನ್ನ ಚಿಕ್ಕಮ್ಮನ ಮನೆಯಲ್ಲಿ ಬೆಳೆದರು. ಸಂತ ಜೋಸೆಫ್ ಶಾಲೆಗೆ ಸೇರಿಕೊಂಡರೂ ಬಡತನದಿಂದಾಗಿ ವಿದ್ಯೆ ಮುಂದುವರಿಸಲಾಗಲಿಲ್ಲ. ಕುಟುಂಬ ನಿರ್ವಹಣೆಗಾಗಿ ಎಳವೆಯಲ್ಲೇ ಅಲ್ಲಿಇಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಶ್ರೀಮಂತರ ಮನೆಯ ಪಾತ್ರ ತೊಳೆಯಲು ಹೋಗುತ್ತಿದ್ದ ಲೀಲಾವತಿ ಮುಂದೊಂದು ದಿನ ದಕ್ಷಿಣ ಭಾರತವೇ ತಿರುಗಿ ನೋಡುವಂತೆ ಆ ಕಾಲಕ್ಕೆ ದೊಡ್ಡ ನಟರಾಗಿದ್ದ ಡಾ.ರಾಜ್‌ಕುಮಾರ್, ಎಂ ಜಿ ರಾಮಚಂದ್ರನ್, ಎನ್ ಟಿ ರಾಮರಾವ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಜತೆಗೆ ನಾಯಕಿಯಾಗಿ ನಟಿಸಿ ಎತ್ತರಕ್ಕೆ ಬೆಳೆದಿದ್ದು ಈಗ ಇತಿಹಾಸ. ಎಳೆ ಪ್ರಾಯದಲ್ಲಿ ವೃತ್ತಿ ರಂಗಭೂಮಿಯ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ ಲೀಲಾವತಿ ಆ ಬಳಿಕ ಚಲನಚಿತ್ರಗಳಲ್ಲಿ ನಟಿಸಲು ಶುರುಮಾಡಿದರು. 1958ರಲ್ಲಿ ಮಾಂಗಲ್ಯ ಯೋಗ ಎಂಬ ಹೆಸರಿನ ಚಿತ್ರದಲ್ಲಿ ಮೊದಲ ಬಾರಿ ನಾಯಕಿಯಾಗಿ ನಟಿಸಿದ ಲೀಲಾವತಿ 1960ರಲ್ಲಿ ಮೊದಲ ಬಾರಿಗೆ ಡಾ. ರಾಜ್‌ಕುಮಾರ್ ಅವರೊಂದಿಗೆ ರಣಧೀರ ಕಂಠೀರವ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದಾದ ಬಳಿಕ ರಾಜ್‌ಕುಮಾರ್ ಮತ್ತು ಲೀಲಾವತಿ ಜೋಡಿ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾಯಿತು. ನಂತರ ಬಂದ ರಾಣಿ ಹೊನ್ನಮ್ಮ, ಸಂತ ತುಕಾರಾಮ, ವೀರ ಕೇಸರಿ, ಮನ ಮೆಚ್ಚಿದ ಮಡದಿ, ಕುಲವಧು, ಗೆಜ್ಜೆ ಪೂಜೆ, ಮುಂತಾದ ಚಿತ್ರಗಳು ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿಯವರ ಜೋಡಿ ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿಗೋಪುರ, ಕನ್ಯಾರತ್ನ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಕೆಲ ಚಿತ್ರಗಳಲ್ಲಿ ಆ ಕಾಲಕ್ಕೆ ನಾಯಕ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು. 70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಅಭಿನಯಿಸತೊಡಗಿದ ಲೀಲಾವತಿ ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ, ನಾನಾ ರೀತಿಯ ಪೋಷಕ ಪಾತ್ರಗಳಲ್ಲಿ ನಟಸಿದರು. ಅವುಗಳಲ್ಲಿ ಗೆಜ್ಜೆಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತಕುಂಬಾರ ಮುಂತಾದ ಚಿತ್ರಗಳು ಪ್ರಮುಖವಾದದ್ದು.
ಮೂಲತಃ ತುಳುನಾಡಿನ ಬೆಳ್ತಂಗಡಿಯಲ್ಲಿ ಹುಟ್ಟಿದ್ದ ಲೀಲಾವತಿ ತನ್ನ ಮಾತೃಭಾಷೆಯ ಮೇಲಿನ ಅಭಿಮಾನದಿಂದಾಗಿ ತುಳು ಚಿತ್ರಗಳಲ್ಲಿಯೂ ನಟಿಸಿದ್ದರು. ತುಳು ಚಿತ್ರ ಸಾವಿರೊಡೊರ್ತಿ ಸಾವಿತ್ರಿ ಸೇರಿದಂತೆ ದಾರೆದ ಬುಡೆದಿ, ಬಿಸತ್ತಿ ಬಾಬು, ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿ ತುಳು ಭಾಷಾಭಿಮಾನವನ್ನು ಮೆರೆದಿದ್ದರು.
ಕರ್ನಾಟಕ ಸರಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ಯುನ್ನತ ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು 1999-2000 ನೇ ಸಾಲಿನಲ್ಲಿ ಪಡೆದ ಲೀಲಾವತಿ 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. 2006ರಲ್ಲಿ ಅತ್ಯುತ್ತಮ ಪೋಷಕ ನಟಿ ಫಿಲಂಫೇರ್ ಅವಾರ್ಡ್, 1970ರ ಸಾಲಿನಲ್ಲಿ ಗೆಜ್ಜೆಪೂಜೆ, 1971-72 ಸಿಪಾಯಿ ರಾಮು, 1989-90ರಲ್ಲಿ ಡಾ. ಕೃಷ್ಣ ಚಿತ್ರಕ್ಕೆ ರಾಜ್ಯ ಸರಕಾರದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಲೀಲಾವತಿ ಕಾಲೇಜು ಹೀರೊ, ಕನ್ನಡದ ಕಂದ, ಶುಕ್ರ, ಯಾರದು ಎಂಬ ಚಿತ್ರವನ್ನು ನಿರ್ಮಿಸಿದ್ದರು ನೆಲಮಂಗಲದ ಬಳಿಯ ಫಾರ್ಮ್ ಹೌಸ್ ನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿರುವ ಲೀಲಾವತಿ ನೆಲಮಂಗಲದ ಸುತ್ತಮುತ್ತ ವಾಸಿಸುವ ಜನರ ಆರೋಗ್ಯ ಸೇವೆಗಾಗಿ ಸೋಲದೇವನ ಹಳ್ಳಿಯಲ್ಲಿ ಆಸ್ಪತ್ರೆಯೊಂದನ್ನು ಕಟ್ಟಿಸಿದ್ದಾರೆ. ಅವರು ನಿರ್ಮಿಸಿಕೊಟ್ಟ ಪಶು ಚಿಕಿತ್ಸಾ ಆಸ್ಪತ್ರೆ ಇತ್ತೀಚಿಗೆ ಅಷ್ಟೇ ಆರಂಭಗೊಂಡಿದ್ದು ಲೀಲಾವತಿಯವರ ಮಾತೃ ಹೃದಯಕ್ಕೆ ಸಾಕ್ಷಿಯಾಗಿದೆ. ಅಗಲಿದ ದಿವ್ಯಾತ್ಮಕ್ಕೆ ಶಾಂತಿ ಸಿಗಲಿ. ಇದು ಸುದ್ದಿ ಬಳಗದ, ಓದುಗರ, ವೀಕ್ಷಕರ ಆಶಯ.