ಮಂಗಳೂರು(ಲಕ್ನೋ): ಬಿಎಸ್ಪಿ ಮುಖ್ಯಸ್ಥೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಪಕ್ಷದ ನೂತನ ಉತ್ತರಾಧಿಕಾರಿಯಾಗಿ ತನ್ನ ಸೋದರಳಿಯ ಆಕಾಶ್ ಆನಂದ್ ಅವರನ್ನು ನೇಮಿಸಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಬಿಎಸ್ಪಿ ಮುಂದಿನ ಚುನಾವಣೆಗೆ ಹೊಸ ಉತ್ತರಾಧಿಕಾರಿಯನ್ನು ಕಂಡುಕೊಂಡಿದ್ದು, ಉತ್ತರ ಪ್ರದೇಶ ಮತ್ತು ಉತ್ತರಾಖಂಡವನ್ನು ಹೊರತುಪಡಿಸಿ ಬಹುಜನ ಸಮಾಜ ಪಕ್ಷದಲ್ಲಿ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರು ಉತ್ತರಾಧಿಕಾರಿ ಎಂದು ಮಾಯಾವತಿ ಹೆಸರಿಸಿದ್ದಾರೆ. ಈ ಸಂಬಂಧ ಸುದ್ದಿ ಸಂಸ್ಥೆ ಎ ಎನ್ ಐ ಗೆ ಪ್ರತಿಕ್ರಿಯಿಸಿರುವ ಪಕ್ಷದ ನಾಯಕ ಉದಯವೀರ್ ಸಿಂಗ್ ” ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ” ಎಂದು ತಿಳಿಸಿದ್ದಾರೆ. ಲಕ್ನೋದಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ಡಿ.10ರಂದು ಮಾಯಾವತಿ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಈ ಘೋಷಣೆ ಮಾಡಿದ್ದಾರೆ. ಆದರೆ ಪಕ್ಷದ ಅಧಿಕೃತ ಪ್ರಕಟನೆ ಇನ್ನೂ ಹೊರಬಿದ್ದಿಲ್ಲ.