ಮಂಗಳೂರು (ಮಡಿಕೇರಿ): 60 ವರ್ಷ ತುಂಬಿದವರು, ಹೃದಯ ಸಂಬಂಧಿ ಸಮಸ್ಯೆ, ಕೋವಿಡ್ ಲಕ್ಷಣ ಹೊಂದಿರುವವರು ಕಡ್ಡಾಯ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಇಲ್ಲಿನ ಕುಶಾಲನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೋವಿಡ್ ಪರೀಕ್ಷೆ ಹೆಚ್ಚಿಸಲಾಗುವುದು, ಉಸಿರಾಟದ ತೊಂದರೆ ಹಾಗೂ ಕೋವಿಡ್ ಲಕ್ಷಣ ಹೊಂದಿರುವವರಿಗೆ ಪರೀಕ್ಷೆ ಕಡ್ಡಾಯಗೊಳಿಸಲಾಗುವುದು. ಅನಗತ್ಯ ಆತಂಕ ಬೇಡ ಎಂದರು. ಎಲ್ಲರಿಗೂ ಮಾಸ್ಕ್ ಕಡ್ಡಾಯ ಹಾಗೂ ಜನರ ಓಡಾಟದ ಮೇಲೆ ನಿರ್ಬಂಧ ಹೇರುವಂತಹ ಸ್ಥಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಂಸತ್ತಿನಲ್ಲಿ ಈಚೆಗೆ ನುಸುಳಿದವರಿಗೆ ಸಂಸದ ಪ್ರತಾಪ ಸಿಂಹ ಪಾಸ್ ಕೊಟ್ಟಿದ್ದು ನಿಜ. ಒಂದು ವೇಳೆ ಕಾಂಗ್ರೆಸ್ ಪಕ್ಷದ ಸಂಸದರು ಈ ಕೆಲಸ ಮಾಡಿದ್ದರೆ ಪ್ರತಾಪ ಸಿಂಹ ಏನು ಹೇಳುತ್ತಿದ್ದರು ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ಸಂಸದರಾಗಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು. ಈಗ ಪ್ರತಾಪ್ ಸಿಂಹ ಅವರನ್ನು ರಕ್ಷಣೆ ಮಾಡಲು ಬಿಜೆಪಿ ನಿಂತುಕೊಂಡಿದೆ ಎಂದರು.
ಡಾ.ಯತೀಂದ್ರ ಅವರನ್ನು ಗೆಲ್ಲಿಸಲು ಪ್ರತಾಪ ಸಿಂಹ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಲೆಹರ್ ಸಿಂಗ್ ಹೇಳಿದ್ದಾರೆ. ಈ ರೀತಿ ಹುಚ್ಚು ಹುಚ್ಚಾಗಿ ಮಾತನಾಡಿ ಎಂದು ಅವರನ್ನು ರಾಜ್ಯಸಭೆಗೆ ಕಳುಹಿಸಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನದ ಕುರಿತು ಮಾತನಾಡಲಿ ಎಂದರು