ಮಂಗಳೂರು (ಬೆಳಗಾವಿ): ತಾಲೂಕಿನ ಹೊಸ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣದ ತನಿಖೆಯನ್ನು ಸಿಐಡಿ ಡಿಐಜಿ ಸುಧೀರಕುಮಾರ ರೆಡ್ಡಿ ಅವರ ನೇತೃತ್ವದ ತಂಡ ಡಿ.18ರಂದು ಶುರು ಮಾಡಿದೆ. ಭಾನುವಾರ ರಾತ್ರಿ ಬೆಳಗಾವಿಗೆ ಬಂದು ವಾಸ್ತವ್ಯ ಹೂಡಿದ್ದ ತನಿಖಾ ತಂಡ, ಸೋಮವಾರ ಬೆಳಿಗ್ಗೆ ಆಸ್ಪತ್ರೆ, ಸಂತ್ರಸ್ತೆ ಹಾಗೂ ಅವರ ಕುಟುಂಬದವರಿಂದ ಮಾಹಿತಿ ಕಲೆಹಾಕಲು ಆರಂಭಿಸಿದೆ
.
ಸಿಐಡಿ ಎಸ್ಪಿ ಪೃಥ್ವಿಕ್, ರಶ್ಮಿ ಪರಡ್ಡಿ ಹಾಗೂ ಡಿವೈಎಸ್‌ಪಿ ಅಂಜುಮಳ ನಾಯಕ ಸೇರಿ 6 ಜನರ ತಂಡ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ. ಶನಿವಾರವಷ್ಟೇ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ.ಇನ್ನೊಂದೆಡೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲಕುಮಾರ್ ಮೀನಾ ಕೂಡ ಸೋಮವಾರ ಬೆಳಿಗ್ಗೆ ಬೆಳಗಾವಿಗೆ ಆಗಮಿಸಿದ್ದಾರೆ. ದೆಹಲಿಯಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ ಸ್ವಾಗತಿಸಿದರು. ಪ್ರಕರಣ ಸಂಬಂಧ ಮಾಹಿತಿ ಪಡೆಯಲು ಈಗಷ್ಟೇ ಬಂದಿದ್ದೇನೆ. ಸಂತ್ರಸ್ತೆ ಹಾಗೂ ಅವರ ಕುಟುಂಬದವರನ್ನು ಭೇಟಿಯಾಗಿ, ಪರಿಶೀಲಿಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ’ ಎಂದು ಸುನೀಲಕುಮಾರ್ ಮೀನಾ ಹೇಳಿದ್ದಾರೆ.