ಕೇರಳದಲ್ಲಿ ಕೋವಿಡ್ ಸೋಂಕು-ದ.ಕ ಜಿಲ್ಲೆಯಲ್ಲಿ ಅಲರ್ಟ್-‌ಜಿಲ್ಲೆಯಲ್ಲಿ ಸೋಂಕು ಪ್ರಕರಣ ಶೂನ್ಯ ಎಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ

ಮಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಯಾರೂ ಕೂಡ ಭಯಭೀತರಾಗುವುದು ಬೇಡ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದದೂವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್. ಆರ್.ತಿಮ್ಮಯ್ಯ ಅವರು ಡಿ.20ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆ ಕೇರಳ ಗಡಿಭಾಗದಲ್ಲಿ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಕೇರಳದಲ್ಲಿ 27 ಪ್ರಕರಣಗಳು ವರದಿ ಆಗಿದ್ದು, ಈ ಪೈಕಿ 25 ಮಂದಿ ಹೋಂ ಐಸೋಲೋಷನ್ ನಲ್ಲಿದ್ದಾರೆ. ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ವರದಿ ಆಗಿಲ್ಲ ಎಂದು ಹೇಳಿದ್ದಾರೆ. ಗಡಿಭಾಗದ ತಲಪಾಡಿ, ಸಾರಡ್ಕ, ಸ್ವರ್ಗ, ಸುಳ್ಯ ಪದವು ಮತ್ತು ಜಾಲ್ಸೂರು ಗಡಿಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದೆ. ಆದರೆ ಯಾವುದೇ ನಿರ್ಭಂದ ಹಾಕಿಲ್ಲ, ವಾಹನಗಳಲ್ಲಿ ಬರುವ ಪ್ರಯಾಣಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಬಸ್ ಮತ್ತು ರೈಲು ನಿಲ್ದಾಣಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದ ಅವರು ಜಿಲ್ಲೆಯಲ್ಲಿ 1,356 ಆಕ್ಸಿಜೆನ್ ಹಾಸಿಗೆ, 722 ಐಸಿಯು ಹಾಸಿಗೆ ಮತ್ತು 356 ವೆಂಟಿಲೇಟರ್‌ಗಳು ಸುಸಜ್ಜಿತವಾಗಿವೆ. ಸಂಭಾವ್ಯ ಪ್ರಕರಣಗಳನ್ನು ನಿರ್ವಹಿಸಲು ಅಗತ್ಯ ಸೌಕರ್ಯವನ್ನು ಒದಗಿಸಲಾಗುತ್ತದೆ. ಶಬರಿಮಲೆಗೆ ಹೋಗುವ ಎಲ್ಲರನ್ನು ಸಾರಾಸಗಟವಾಗಿ ಕೋವಿಡ್ ತಪಾಸಣೆ ಮಾಡಲ್ಲ. ಆದರೆ ಶಬರಿಮಲೆಗೆ ಹೋಗಿ ವಾಪಸ್ ಬರುವವರಲ್ಲಿ ರೋಗ ಲಕ್ಷಣ ಕಂಡು ಬಂದರೇ ಮಾತ್ರ ತಪಾಸಣೆ ಮಾಡಲಾಗುವುದು ಎಂದು ಹೇಳಿದರು. ರೋಗ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಕೇರಳದಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮಂಗಳೂರಿಗೆ ಬರುತ್ತಾರೆ. ರೋಗ ಲಕ್ಷಣಗಳು ಕಂಡು ಬರುವ ವಿದ್ಯಾರ್ಥಿಗಳು ಪರೀಕ್ಷೆಗೆ ಒಳಗಾಗುತ್ತಾರೆ ಎಂದರು. ಡಾ. ಸದಾಶಿವ ಶಾನುಭಾಗ್ ಸೇರಿದಂತೆ ಹಲವರು ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here