ಮಂಗಳೂರು: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಇಂದು ಫೆಡರೇಷನ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂಜಯ್ ಸಿಂಗ್ ಕುಸ್ತಿ ಫೆಡರೇಷನ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುದ್ದಿಯ ಬೆನ್ನಿಗೇ ದೇಶದ ಖ್ಯಾತ ಕುಸ್ತಿಪಟು ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್, ಪ್ರತಿಭಟನೆಯ ದ್ಯೋತಕವಾಗಿ ತಾವು ಕುಸ್ತಿ ಕ್ರೀಡೆಯನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.
ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ, “ಮಹಿಳಾ ಕುಸ್ತಿಪಟುಗಳು ಕಿರುಕುಳ ಎದುರಿಸುವುದು ಮುಂದುವರಿಯಲಿದೆ ಎಂದು ಇಂದಿನ ಚುನಾವಣಾ ಫಲಿತಾಂಶ ಸೂಚಿಸುತ್ತದೆ” ಎಂದಿದ್ದಾರೆ.
ಸಂಜಯ್ ಸಿಂಗ್ ಅವರು ಫೆಡರೇಷನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಮಹಿಳಾ ಕುಸ್ತಿಪಟುಗಳು ನಿರಂತರ ಕಿರುಕುಳ ಎದುರಿಸುವುದು ಮುಂದುವರಿಯಲಿದೆ. ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ, ಉದ್ಯಮದ ಪಾಲುದಾರ ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಮ್ಮ ಹೋರಾಟ ಮುಂದುವರೆಯುತ್ತದೆ, ನಾನು ಕುಸ್ತಿಯನ್ನು ತ್ಯಜಿಸುತ್ತೇನೆ ಎಂದು ಹೇಳಿ, ತನ್ನ ಕುಸ್ತಿಯ ಶೂವನ್ನು ಪತ್ರಕರ್ತರ ಮುಂದೆ ಇಡುತ್ತಾ ಸಾಕ್ಷಿ ಮಲಿಕ್ ಕಣ್ಣೀರು ಸುರಿಸಿದ್ದಾರೆ.