ಮೂರು ಕೋಣಗಳ ನಾಪತ್ತೆ ಪ್ರಕರಣ- ಎರಡು ಕೋಣಗಳು ಜೀವಂತವಾಗಿ ಪತ್ತೆ-ಹೆಣವಾಗಿ ಪತ್ತೆಯಾದ ಮತ್ತೊಂದು ಕೋಣ-ಸುಖಾಂತ್ಯ ಕಂಡ ಸಂಶಯಕ್ಕೆ ಕಾರಣವಾಗಿದ್ದ ಕೋಣ ಕಾಣೆ ಪ್ರಕರಣ

ಮಂಗಳೂರು(ಬಂಟ್ವಾಳ): ಡಿ.17 ರಂದು ಕಾಣೆಯಾಗಿದ್ದ ಮೂರು ಕೋಣಗಳ ಪೈಕಿ ಎರಡು ಕೋಣಗಳು ಜೀವಂತವಾಗಿ ಪತ್ತೆಯಾಗಿದ್ದು, ಮತ್ತೊಂದು ಕೋಣ ಶವವಾಗಿ ಪತ್ತೆಯಾಗಿದೆ ಎಂದು ಬಂಟ್ವಾಳ ಪೋಲೀಸರು ತಿಳಿಸಿದ್ದು, ಕೋಣಗಳ ಕಳವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಅಮ್ಮುಂಜೆ ದೇವಂದಬೆಟ್ಟು ವಿನಯ ಬಲ್ಯಾಯ ಎಂಬವರ ಮನೆಯ ಸಮೀಪದ ಗದ್ದೆಯಲ್ಲಿ ಮೇಯಲು ಕಟ್ಟಿ ಹಾಕಿದ್ದ ಸುಮಾರು 90 ಸಾವಿರ ಮೌಲ್ಯದ ಮೂರು ಕೋಣಗಳು ಡಿ.17 ರಂದು ನಾಪತ್ತೆಯಾಗಿತ್ತು. ಎಷ್ಟು ಹುಡುಕಿದರೂ ಕೋಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತಡವಾಗಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಮಹಮ್ಮದ್ ಹನೀಫ್ ಎಂಬಾತನ ಮೇಲೆ ಸಂಶಯವಿದ್ದು ಈತ ಕಳವು ಮಾಡಿರುವ ಶಂಕೆಯನ್ನು ದೂರಿನಲ್ಲಿ ತಿಳಿಸಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪೋಲೀಸರು ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ವೇಳೆ ಕೋಣಗಳು ಪತ್ತೆಯಾಗಿದೆ. ಈತ ಕಳವು ಪ್ರಕರಣದಲ್ಲಿಲ್ಲದ ಕಾರಣ ಆತನನ್ನು ಬಿಟ್ಟು ಕಳುಹಿಸಲಾಗಿದೆ.

ನಾಪತ್ತೆಯಾದ ಮೂರು ಕೋಣಗಳ ಪೈಕಿ ಎರಡು ಕೋಣಗಳು ಸ್ವಲ್ಪ ದೂರದ ಗುಡ್ಡವೊಂದರಲ್ಲಿ ಮೇಯುತ್ತಿದ್ದರೆ, ಇನ್ನೊಂದು ಕೋಣ ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಹೂತು ಮೇಲೆ ಬರಲಾಗದೆ ಮೃತಪಟ್ಟಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಸ್ಥಳೀಯರು ಕೋಣಗಳು ಇರುವುದನ್ನು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಕೋಣಗಳನ್ನು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗೊಂದಲ ಮತ್ತು ಸಂಶಯಕ್ಕೆ ಕಾರಣವಾಗಿದ್ದ ಕೋಣಗಳ ಕಳವು ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.

LEAVE A REPLY

Please enter your comment!
Please enter your name here