ಬಿಜೆಪಿ–ಜೆಡಿಎಸ್‌ ಮೈತ್ರಿ-ಜನವರಿ ಅಂತ್ಯಕ್ಕೆ ಸೀಟು ಹಂಚಿಕೆ ಪೂರ್ಣ–ಹೆಚ್‌ ಡಿ ಕುಮಾರಸ್ವಾಮಿ

ಮಂಗಳೂರು(ನವದೆಹಲಿ): ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಭೇಟಿ ಸಂಸತ್‌ ಭವನದ ಪ್ರಧಾನಿಗಳ ಕಾರ್ಯಾಲಯದಲ್ಲಿ ನಡೆಯಿತು.

ರಾಜ್ಯ ರಾಜಕೀಯ ಪರಿಸ್ಥಿತಿಯ ಜತೆಗೆ ಕೊಬ್ಬರಿ ಖರೀದಿ, ಕಾಡುಗೊಲ್ಲ ಜಾತಿಗೆ ಮೀಸಲಾತಿ ಸೌಲಭ್ಯ‌ ಹಾಗೂ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಾಜಿ ಪ್ರಧಾನಿಗಳು ಮೋದಿ ಅವರ ಜತೆ ಚರ್ಚೆ ನಡೆಸಲಾಯಿತು ಎಂದು ಕುಮಾರಸ್ವಾಮಿ ತಿಳಿಸಿದರು. ಇದೇ ವೇಳೆ ಕೊಬ್ಬರಿಗೆ ಬೆಂಬಲ ಬೆಲೆ ನೀಡುವುದು ಹಾಗೂ ನಾಫೆಡ್‌ ಮೂಲಕ ಖರೀದಿ ಮಾಡಬೇಕು ಎಂಬ ಬಗ್ಗೆ ಪ್ರಧಾನಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಗ್ಗೆ ಪ್ರಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಮಾಜಿ ಸಂಸದರಾದ ಕುಪೇಂದ್ರ ರೆಡ್ಡಿ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸಿ.ಎನ್.ಬಾಲಕೃಷ್ಣ ಜತೆಯಲ್ಲಿದ್ದರು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕುಮಾರಸ್ವಾಮಿ, ‘ನಿಖಿಲ್ ಕುಮಾರಸ್ವಾಮಿ ಅವರು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ಜನರು ಚುನಾವಣೆಗೆ ನಿಲ್ಲಿ ಎಂದು ಹೇಳುತ್ತಿದ್ದಾರೆ. ಮಂಡ್ಯ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲಿ ಎಂದು ಬಯಸುತ್ತಿದ್ದಾರೆ. ಎರಡು ಬಾರಿ ಅವರು ಸೋತಿದ್ದಾರೆ. ಹೀಗಾಗಿ ಜನರ ಅನುಕಂಪವೂ ಇದೆ. ಆದರೆ, ಅವರಿಗೆ ಸ್ಪರ್ಧೆ ಮಾಡುವ ಉದ್ದೇಶವಿಲ್ಲ’ ಎಂದು ತಿಳಿಸಿದರು. ‘ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ನಾವೇ ಪರಸ್ಪರ ಕೂತು ಅಂತಿಮಗೊಳಿಸುತ್ತೇವೆ. ಆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಒಂದು ಕ್ಷೇತ್ರ ಹೆಚ್ಚೂ ಕಡಿಮೆ ಆಗಬಹುದು ಅಷ್ಟೇ. ಅದರಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಮುಖ್ಯವಾಗಿ ಪರಸ್ಪರ ವಿಶ್ವಾಸ ಬೇಕು ಅಷ್ಟೇ, ಅದನ್ನು ನಾವು ಉಳಿಸಿಕೊಳ್ಳಬೇಕು. ಅದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇನೆ. ಜನವರಿ ಅಂತ್ಯದ ಒಳಗೆ ನಾವು ಎಲ್ಲಾ ನಿರ್ಧಾರ ಮಾಡುತ್ತೇವೆ’ ಎಂದು ಅವರು ಹೇಳಿದರು.

ನಾವು ಎಷ್ಟು ಗೆಲ್ಲುತ್ತೇವೆ ಎನ್ನುವ ಕಡೆಯಷ್ಟೇ ನಾವು ಕೇಳುತ್ತೇವೆ. ನಾವು ಎಲ್ಲೆಲ್ಲಿ ಗೆಲ್ಲುತ್ತೇವೆ ಅಂತ ನಮ್ಮ ಬಳಿ ರಿಪೋರ್ಟ್ ಇದೆ. ಆ ರಿಪೋರ್ಟ್ ಪ್ರಕಾರ ನಾವು ಕೆಲಸ ಮಾಡುತ್ತೇವೆ. ಇಲ್ಲಿ ಸೀಟ್ ಹಂಚಿಕೆ ಒಂದೇ ಪ್ರಮುಖ ಅಲ್ಲ. ನಾವು ಪರಸ್ಪರ ವಿಶ್ವಾಸ, ನಂಬಿಕೆಯಿಂದ ಕೆಲಸ ಮಾಡುತ್ತೇವೆ. ಮೂರನೇ ಅವಧಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಉದ್ದೇಶ ನನ್ನ ಮುಂದೆ ಇಲ್ಲ. ನಾನೇನಿದ್ದರೂ ರಾಜ್ಯ ರಾಜಕಾರಣಕ್ಕೆ ಸೀಮಿತ. ನಾನು ಇಲ್ಲಿಯೇ ಇದ್ದರೆ ರಾಜ್ಯಕ್ಕೆ ಒಳ್ಳೆಯದು ಎನ್ನುವುದು ಅನೇಕ ಜನರ ಅಭಿಪ್ರಾಯ, ನನ್ನ ಅಭಿಪ್ರಾಯವೂ ಅದೇ ಆಗಿದೆ. ನಾನು ಕರ್ನಾಟಕದಲ್ಲೇ ಇರಲು ತೀರ್ಮಾನ ಮಾಡಿದ್ದೇನೆ ಎಂದರು. ಕರ್ನಾಟಕದ ರಾಜಕೀಯ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ರಾಜಕೀಯದಲ್ಲಿ ಶಿಂಧೆಯೂ ಇದ್ದಾರೆ, ಅಜಿತ್ ಪವಾರ್ ಸಹ ಇದ್ದಾರೆ. ಯಾರು ಮೊದಲು ಮುಂದೆ ಬರುತ್ತಾರೋ ಕಾದು ನೋಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು’ ಎಂದರು.

 

LEAVE A REPLY

Please enter your comment!
Please enter your name here