



ಮಂಗಳೂರು: ಸಂಸತ್ತಿನಿಂದ 142 ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಇಂದು ಮಂಗಳೂರಿನ ಕ್ಲಾಕ್ ಟವರ್ ಮುಂಭಾಗ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.







ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಕೇಂದ್ರ ಸರಕಾರದ ಸರ್ವಾಧಿಕಾರ ಧೋರಣೆಯಿಂದಾಗಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ. ಸಂಸತ್ತಿನಲ್ಲಿ ನಡೆದ ದಾಂಧಲೆಗೆ ಭದ್ರತಾ ವೈಫಲ್ಯ ಕಾರಣವಾಗಿದ್ದು ಅದಕ್ಕೆ ಗೃಹ ಸಚಿವರು ಸ್ಪಷ್ಟೀಕರಣ ನೀಡಬೇಕಾಗಿದ್ದು, ಕೇಳಿದ್ದಕ್ಕೆ ಸಂಸದರನ್ನು ಅಮಾನತು ಮಾಡಲಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಯಾವುದನ್ನೂ ಪ್ರಶ್ನಿಸಲು ಅವಕಾಶವಿಲ್ಲ. ತನಿಖಾ ಸಂಸ್ಥೆಗಳನ್ನು ಬಳಸಿ ವಿಪಕ್ಷಗಳ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದರು.




ವಿಪಕ್ಷಗಳ ಆಡಳಿತ ಇರುವಲ್ಲಿ ರಾಜ್ಯಪಾಲರನ್ನು ಬಳಸಿಕೊಂಡು ತೊಂದರೆ ನೀಡಲಾಗುತ್ತಿದೆ. ದೇಶದ ಪ್ರಜಾಪ್ರಭುತ್ವ, ಜಾತ್ಯಾತೀತ, ಸಮಾಜವಾದದ ವ್ಯವಸ್ಥೆ, ಸಂಸ್ಕೃತಿಯನ್ನು ನಾಶ ಪಡಿಸಲಾಗುತ್ತಿದೆ. ಮೂಲಭೂತ ಹಕ್ಕುಗಳು ದಿನೇ ದಿನೇ ಕ್ಷೀಣಿಸುತ್ತಿದೆ. ಮಾಧ್ಯಮಗಳು ಕೂಡ ಪ್ರಶ್ನೆ ಮಾಡಲಾಗದಂತಹ ಸ್ಥಿತಿ ಇದೆ. ಪ್ರಧಾನಿ ಮೂರನೇ ಬಾರಿ ಪ್ರಧಾನಿಯಾದರೆ ಸಂವಿಧಾನ ಕೂಡ ಉಳಿಯುವುದಿಲ್ಲ. ಯಾವ ಸಂಸ್ಥೆಯು ಇರುವುದಿಲ್ಲ. ಮೋದಿಯವರನ್ನು ಪೂಜೆ ಮಾಡಿ ಕುಳಿತುಕೊಳ್ಳುವ ಸ್ಥಿತಿ ಬರಲಿದೆ. ಸರ್ವಾಧಿಕಾರ ಧೋರಣೆ ವಿರುದ್ದ ಹೋರಾಟ ಮುಂದುವರೆಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು. ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್ ಹಾಗೂ ಕಾಂಗ್ರೆಸ್ ಮುಖಂಡರುಗಳಾದ ಮಿಥುನ್ ರೈ, ಮಮತಾ ಗಟ್ಟಿ, ಶಶಿಧರ ಹೆಗ್ಡೆ ಸೇರಿದಂತೆ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.












