ತಾಯಿಯ ವಶದಲ್ಲಿ ಇದ್ದ ಮಗುವನ್ನು ತಂದೆ ಕರೆದೊಯ್ದರೆ ಅದು ಅಪಹರಣವಲ್ಲ-ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಮಂಗಳೂರು: ತಾಯಿಯ ವಶದಲ್ಲಿದ್ದ ಮಗುವನ್ನು ತಂದೆ ಕರೆದುಕೊಂಡು ಹೋದರೆ ಅದನ್ನು ಅಪಹರಣ ಎಂದು ಹೇಳಲಾಗದು ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಮಹತ್ವದ ತೀರ್ಪು ನೀಡಿದೆ.

ಪರಿತ್ಯಕ್ತ ಪತ್ನಿಯ ಆರೈಕೆ ಮತ್ತು ಪೋಷಣೆಯಲ್ಲಿದ್ದ ಮೂರು ವರ್ಷದ ಮಗುವನ್ನು ಕರೆದೊಯ್ದ ಆರೋಪದ ಮೇಲೆ ಪತಿಯ ವಿರುದ್ಧ ಪತ್ನಿ ಅಪಹರಣ ಪ್ರಕರಣದ ದೂರನ್ನು ನೀಡಿದ್ದರು. ಈ ದೂರನ್ನು ದಾಖಲಿಸಿಕೊಂಡ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 363ರ ಅಡಿ ಕೇಸು ದಾಖಲಿಸಿದ್ದರು. ಈ ಪ್ರಕರಣವನ್ನು ವಜಾಗೊಳಿಸಬೇಕು ಎಂದು ಕೋರಿ ಅರ್ಜಿದಾರರಾದ ಆರೋಪಿ ಆಶೀಶ್ ಅನಿಲ್ ಕುಮಾರ್ ಮುಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿನಯ್ ಜೋಷಿ ಮತ್ತು ನ್ಯಾ. ವಾಲ್ಮೀಕಿ ಎಸ್.ಎ. ಮೆನೆಜೆಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅರ್ಜಿಯನ್ನು ಪುರಸ್ಕರಿಸಿದೆ.

ಯಾವುದೇ ಜೈವಿಕ ತಂದೆ ತನ್ನ ಪುತ್ರನನ್ನು ಕರೆದುಕೊಂಡು ಹೋದರೆ ಅವರ ವಿರುದ್ಧ ಅಪಹರಣದ ಆರೋಪದ ಅಡಿ ಪ್ರಕರಣವನ್ನು ದಾಖಲಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಇದು ಒಬ್ಬ ಕಾನೂನಾತ್ಮಕ ಪೋಷಕರ ವಶದಿಂದ ಇನ್ನೊಬ್ಬ ಕಾನೂನಾತ್ಮಕ ಪೋಷಕರ ವಶಕ್ಕೆ ಹೋದ ಹಾಗಿದೆ. ಇದನ್ನು ಅಪಹರಣ ಎಂದು ಭಾವಿಸಲಾಗದು. ಅವರೂ ಕಾನೂನಾತ್ಮಕ ಪೋಷಕರಾಗಿರುವುದರಿಂದ ತಂದೆ ಮಗುವನ್ನು ಅಪಹರಿಸಿದ್ದಾರೆ ಎನ್ನಲಾಗದು ಎಂದು ವಿಭಾಗೀಯ ಪೀಠ ತೀರ್ಪಿನಲ್ಲಿ ಹೇಳಿದೆ. ಯಾವುದೇ ನ್ಯಾಯಾಲಯ ಅಪ್ರಾಪ್ತ ಮಗುವನ್ನು ಕಾನೂನುಬದ್ಧವಾಗಿ ತಾಯಿಯ ವಶಕ್ಕೆ ನೀಡಿದ ಪ್ರಕರಣವಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿದೆ.

LEAVE A REPLY

Please enter your comment!
Please enter your name here