ಮಂಗಳೂರು(ಮೈಸೂರು): ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ಇನ್ನೂ ಹಿಂಪಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಡಿ.23ರಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಕಾನೂನನ್ನು ಇನ್ನೂ ವಾಪಸ್ ಪಡೆದಿಲ್ಲ. ಶುಕ್ರವಾರ ಕವಲಂದೆಯಲ್ಲಿ ಯಾರೋ ಪ್ರಶ್ನೆ ಕೇಳಿದ್ದಕ್ಕೆ ಆ ರೀತಿ ಹೇಳಿದ್ದೇನೆ ಎಂದು ತಿಳಿಸಿದರು. ಆದರೆ ಹಿಜಾಬ್ ನಿಷೇಧ ಹಿಂಪಡೆಯುವ ಬಗ್ಗೆ ಯೋಚನೆ ಮಾಡಲಾಗಿದೆ. ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಪ್ರತಿಕ್ರಿಯೆ:
ರಾಜ್ಯ ಕಾಂಗ್ರೆಸ್ ಸರಕಾರ ಹಿಜಾಬ್ ನಿಷೇಧ ಹಿಂಪಡೆಯುವ ಚಿಂತನೆಗೆ ಸಂಬಂಧಿಸಿದಂತೆ ಬಿಜೆಪಿ ಹೋರಾಟ ಮಾಡುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಹೇಳಿದ್ದಾರೆ. ಹಿಜಾಬ್ ನಿಷೇಧ ರದ್ದು ಮಾಡುವಂತೆ ಯಾವ ಮುಸ್ಲಿಂ ನಾಯಕರು ಕೇಳಿದ್ದರು? ಇಂತಹ ಡೊಂಬರಾಟವನ್ನು ಮುಖ್ಯಮಂತ್ರಿಗಳು ಬಿಡಬೇಕು. ಅಲ್ಲದೇ, ಶಾಲಾ ಕಾಲೇಜು ಮಕ್ಕಳು ಒಂದೇ ಸಮಾನವಾಗಿ ಇರಬೇಕು. ಇದನ್ನು ಧಿಕ್ಕರಿಸಿ ಅಲ್ಪಸಂಖ್ಯಾತರನ್ನು ತೃಪ್ತಿ ಪಡಿಸುವುದನ್ನು ಕಾಂಗ್ರೆಸ್ ಬಿಡಬೇಕು ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಶರಣ್ ಪಂಪ್‌ವೆಲ್ ಪ್ರತಿಕ್ರಿಯೆ:
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ರದ್ದು ಪಡಿಸುವ ಹೇಳಿಕೆ ನೀಡಿರುತ್ತಾರೆ. ಇದನ್ನು ವಿಶ್ವ ಹಿಂದೂ ಪರಿಷತ್ ಬಲವಾಗಿ ವಿರೋಧಿಸುತ್ತದೆ ಮತ್ತು ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಪ್ರತಿಕ್ರಿಯಿಸಿದ್ದಾರೆ. ವಾರ್ಷಿಕ ಪರೀಕ್ಷೆಗಳು ಆರಂಭವಾಗುತ್ತಿದ್ದು ಮಕ್ಕಳು ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಹಿಜಾಬ್ ಹಾಕಿ ಬಂದರೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂಬ ಹೇಳಿಕೆ ನೀಡುವ ಮೂಲಕ ಸಿ ಎಂ ಮತಾಂಧತೆಯ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ ಅವರು ಹಿಜಾಬ್ ನಿಷೇಧ ರದ್ದು ಮಾಡಿದ್ದೇ ಆದಲ್ಲಿ ಕರ್ನಾಟಕದ ಎಲ್ಲಾ ಶಾಲಾ ಕಾಲೇಜು ಕೇಸರಿಮಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುರಳಿಕೃಷ್ಣ ಹಸಂತಡ್ಕ ಪ್ರತಿಕ್ರಿಯೆ:
ಹಿಜಾಬ್ ನಿಷೇಧ ರದ್ದು ಕುರಿತು ಸಿಎಂ ಹೇಳಿಕೆಯನ್ನು ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಖಂಡಿಸಿದ್ದಾರೆ. ಕಾಂಗ್ರೆಸ್ ಸರಕಾರದ ಅನ್ಯಕೋಮಿನವರ ತುಷ್ಠೀಕರಣ ಮಿತಿಮೀರುತ್ತಿದ್ದು ಒಂದು ವೇಳೆ ಹಿಜಾಬ್ ನಿಷೇಧವನ್ನು ಹಿಂಪಡೆದರೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಕೇಸರಿ ಚಳುವಳಿಯನ್ನು ಆರಂಭಿಸುವುದಾಗಿ ಹೇಳಿದ್ದಾರೆ.