ಮಂಗಳೂರು: “ನನ್ನ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಟ್ಟು ಅಶಕ್ತರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಅರೋಗ್ಯವನ್ನು ನೀಡುವ ಉದ್ದೇಶದಿಂದ ಎಂ.ಆರ್.ಜಿ. ಗ್ರೂಪ್ ಮೂಲಕ ಪ್ರತಿವರ್ಷ ನೆರವು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಪ್ರಾರಂಭದಲ್ಲಿ 1 ಕೋಟಿ 25 ಲಕ್ಷ ರೂ. ನೆರವು ನೀಡಿದ್ದು ಈ ಬಾರಿ 4 ಕೋಟಿ ರೂ. ನೆರವು ನೀಡಲು ಮುಂದಾಗಿದ್ದೇವೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳಿಗೆ ಇದರ ಆರ್ಜಿ ನಮೂನೆಯನ್ನು ಕಳುಹಿಸಿ ಪ್ರತೀ ಭಾಗದಿಂದ 25ರಷ್ಟು ಅರ್ಜಿಯನ್ನು ಸ್ವೀಕರಿಸಿ ಅದನ್ನು ಪರಿಶೀಲಿಸಿ 2000 ಅರ್ಜಿಗಳಲ್ಲಿ 1800 ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಸಮಾಜದ ನೊಂದವರು, ಅಶಕ್ತರಿಗೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ಎಂ.ಆರ್.ಜಿ. ಗ್ರೂಪ್ ಚೇರ್ ಮೆನ್ ಕೆ. ಪ್ರಕಾಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ ನೆರವು ಪ್ರಧಾನ ಕಾರ್ಯಕ್ರಮ ಡಿ.25 ರಂದು ಸಂಜೆ 3 ಗಂಟೆಗೆ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್, ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಸಂಘ ಸಂಸ್ಥೆಗಳ ಮೂಲಕ ಆಯ್ಕೆ ಮಾಡಿರುವುದರಿಂದ ಫಲಾನುಭವಿಗಳನ್ನು ಕರೆದುಕೊಂಡು ಬರುವ ಹೊಣೆಗಾರಿಕೆಯನ್ನು ಆಯಾ ಪ್ರದೇಶದ ಸಂಘ ಸಂಸ್ಥೆಗಳಿಗೆ ನೀಡಲಾಗಿದೆ. ಅವರ ಪ್ರಯಾಣ ವೆಚ್ಚವನ್ನು ನಮ್ಮ ಸಂಸ್ಥೆಯೇ ಭರಿಸುತ್ತದೆ. ನೆರವು ವಿತರಣೆ ಸಮಾರಂಭದಲ್ಲಿ 25 ಕೌಂಟರ್ ಗಳನ್ನು ತೆರೆಯಲಾಗುತ್ತದೆ. ಅಲ್ಲಿ ಫಲಾನುಭವಿಗಳು ತಮ್ಮ ಹೆಸರು ಹೇಳಿ ಮತ್ತು ಈಗಾಗಲೇ ವಿತರಣೆ ಮಾಡಿರುವ ಟೋಕನ್ ಗಳನ್ನು ತೋರಿಸಿ ಚೆಕ್ ಪಡೆಯಬಹುದು. ಎಲ್ಲಿಯೂ ಅನವಶ್ಯಕ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಗುತ್ತದೆ.
ಮಾನಸಿಕ, ಅಂಗವೈಕಲ್ಯ, ದೀರ್ಘ ಕಾಲೀನ ಚಿಕಿತ್ಸೆ ಬೇಡುವ ಕ್ಯಾನ್ಸರ್ ನಂತಹ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆಗೆ ನೆರವು ನೀಡಲು ಆದ್ಯತೆ ಕೊಟ್ಟಿದ್ದೇವೆ. ಪ್ರತಿಭಾವಂತ ಆದರೆ ಕಷ್ಟದ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಿದ್ದೇವೆ. ಉಳಿದಂತೆ ಕ್ರೀಡಾಳುಗಳು, ರಾಷ್ಟ್ರ ಮತ್ತು ರಾಜ್ಯಕ್ಕೆ ಕೀರ್ತಿ ತಂದ ಸಾಧಕರನ್ನು ಪ್ರೋತ್ಸಾಹಿಸಲು ಅವರನ್ನು ಗೌರವಿಸಲು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ಮಾನವೀಯ ನೆರವು:
ಬೆಂಗಳೂರಿನಲ್ಲಿ ನಡೆದ ಕಂಬಳವನ್ನು ವೀಕ್ಷಿಸಿ ಊರಿಗೆ ಮರಳುತ್ತಿದ್ದವರು ಅಪಘಾತದಲ್ಲಿ ಸಾವಿಗೀಡಾದ ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಮತ್ತು ಗಾಯಗೊಂಡವರಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡಲಾಗುತ್ತಿದೆ. ಇದರಿಂದ ಆ ಕುಟುಂಬಕ್ಕಾದ ನಷ್ಟವನು ಭರಿಸಲಾಗದಿದ್ದರೂ ಅವರಲ್ಲೊಂದು ಧೈರ್ಯ ತುಂಬುವ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ.
ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ನೇಮಕ:
ಸಮಾಜ ಸೇವಾ ರತ್ನ ಕಾಪು ಲೀಲಾಧರ ಶೆಟ್ಟಿ ಅವರು ಕಾಪುವಿನಲ್ಲಿ ಶಾಲೆಯನ್ನು ನಡೆಸುತ್ತಿದ್ದರು. ಶಿಕ್ಷಕರ ಕೊರತೆಯನ್ನು ನೀಗಿಸಲು ಗೌರವ ಶಿಕ್ಷಕರ ನೇಮಕ ಮಾಡಿ ತಾವೇ ಖರ್ಚು ಭರಿಸುತ್ತಿದ್ದರು. ಅವರ ನಿಧನದ ಬಳಿಕ ಅಲ್ಲಿ ಶಿಕ್ಷಕರಿಗೆ ವೇತನದ ಸಮಸ್ಯೆಯಾಗಬಾರದು ಮತ್ತು ಮಕ್ಕಳು ವಿದ್ಯಾ ವಂಚಿತರಾಗಬಾರದು ಎಂದು ಇನ್ನು ಮುಂದಿನ ಕೆಲ ವರ್ಷ ಆ ಶಾಲೆಗೆ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತದ ಮೂಲಕ “ನೆರವು” ನೀಡಲಾಗುವುದು.
ಡಿಜಿಟಲ್ ಕಂದಕ ನಿವಾರಣೆಗೆ ಪ್ರಯತ್ನ:
ಆಧುನಿಕ ತಂತ್ರಜ್ಞಾನ ನಗರಗಳಲ್ಲಿ ಲಭ್ಯವಾದಷ್ಟು ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಲಭ್ಯ ಇಲ್ಲ. ಇದು ಶಾಲಾ ಮಕ್ಕಳ ಕಲಿಕಾ ಸೌಲಭ್ಯಗಳಿಗೂ ಅನ್ವಯಿಸುತ್ತದೆ. ಬಂಟ್ವಾಳದ ಶಾಲೆಯೊಂದಕ್ಕೆ ಕಂಪ್ಯೂಟರ್ ನೀಡುವ ಮೂಲಕ ಅಲ್ಲಿಯ ಮಕ್ಕಳನ್ನು ಕಂಪ್ಯೂಟರ್ ಸಾಕ್ಶರರನ್ನಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಡಿಜಿಟಲ್ ಕಂದಕ ನಿವಾರಣೆಯ ನಿಟ್ಟಿನಲ್ಲಿ ನಮ್ಮದೊಂದು ಸಣ್ಣ ಪ್ರಯತ್ನ ಇದು ಎಂದರು
ಶೌಚಾಲಯಕ್ಕೆ ನೆರವು:
ನೈರ್ಮಲ್ಯಕ್ಕೆ ಶಾಲೆಗಳೇ ಮೊದಲ ಪಾಠ ಶಾಲೆ ಎನ್ನಬಹುದು. ಸಾರ್ವಜನಿಕ ಬದುಕಿನಲ್ಲಿ ನೈರ್ಮಲ್ಯ ಪಾಲನೆಯನ್ನು ಮಕ್ಕಳಿಗೆ ಕಲಿಸುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದು. ಹೆಣ್ಣು ಮಕ್ಕಳ ಪಾಲಿಗೆ ಶೌಚಾಲಯ ಘನತೆಗೆ ಸಂಬಂಧಿಸಿದ ಸಂಗತಿ. ಕಾಪು ಕೈಪುಂಜಾಲಿನಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಅಧ್ಯಕ್ಷರಾಗಿರುವ ವಿದ್ಯಾ ಸಾಗರ ಎಜ್ಯುಕೇಶನ್ ಟ್ರಸ್ಟ್ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ನೆರವು ವಿತರಿಸಲಾಗುವುದು.
ಕ್ರೀಡಾ ಪ್ರೋತ್ಸಾಹ:
ಸರಕಾರದ ಖೇಲೋ ಇಂಡಿಯಾದಂತಹ ಯೋಜನೆಗಳು ಗ್ರಾಮೀಣ ಕ್ರೀಡಾಳುಗಳನ್ನು ಪ್ರೋತ್ಸಾಹಿಸುವ ಮಹತ್ವಾಕಾಂಕ್ಷಿ ಯೋಜನೆಗಳು. ಇದರಿಂದಾಗಿ ನಮ್ಮ ದೇಶದ ಅನೇಕ ಪ್ರತಿಭೆಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅವಕಾಶ ಲಭ್ಯವಾಗಿದೆ. ನಮ್ಮ ಈ ನೆರವಿನ ಯೋಜನೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ನಮ್ಮ ಜಿಲ್ಲೆಯ ಕ್ರೀಡಾಳು ಆಯುಷ್ ಶೆಟ್ಟಿ ಅಮೆರಿಕಾದಲ್ಲಿ ನಡೆದ ವಿಶ್ವ ಜ್ಯೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದವರು. ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಹತ್ತನೇ ಶಟ್ಲರ್ ಮತ್ತು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಪಡೆದ ಕರ್ನಾಟಕ ಮೊದಲನೇ ಶಟ್ಲರ್ ಅರ್ಜುನ್ ಶೆಟ್ಟಿ. ಅವರಿಗೆ ನೆರವು ನೀಡಲಾಗುವುದು ಎಂದರು.
ಶೈಕ್ಷಣಿಕ ಸಾಧಕರಿಗೆ ವಿದ್ಯಾರ್ಥಿ ವೇತನ:
ಪಿ.ಯು.ಸಿ.ಯಲ್ಲಿ 600/600 ಅಂಕ ಗಳಿಸಿದ ಅನನ್ಯ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ 625/625 ಅಂಕ ಗಳಿಸಿದ ವೀಕ್ಷಿತಾ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಿ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಪ್ರಕಾಶ್ ಶೆಟ್ಟಿ ಹೇಳಿದರು.