ಮಂಗಳೂರು: ದಾನ ಮಾಡುವ ಮನಸ್ಸು, ಮನಸ್ಸಿನ ಒಳಗಿನಿಂದ ಪ್ರಕಾಶಮಾನವಾಗಿ ಹೊರಬರಬೇಕು. ಅಂತಹ ಮನಸ್ಸು ಪ್ರಕಾಶ್ ಶೆಟ್ಟಿ ಅವರಲ್ಲಿ ನಾನು ಕಂಡಿದ್ದೇನೆ. ಜಾತಿ, ಮತ, ಧರ್ಮವನ್ನು ನೋಡದೇ ಅಸಹಾಯಕರಿಗೆ ಸಹಾಯ ಮಾಡುವುದೇ ಬದುಕಿನ ಸಾರ್ಥಕತೆ ಎಂದು ನಟ, ನಿರ್ದೇಶಕ ಡಾ. ರಮೇಶ್ ಅರವಿಂದ್ ಹೇಳಿದ್ದಾರೆ.
ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಎಂಆರ್ ಜಿ ಸಮೂಹ ಸಂಸ್ಥೆಯ ಹಮ್ಮಿಕೊಂಡಿದ್ದ ಆಶಾ ಪ್ರಕಾಶ್ ಶೆಟ್ಟಿ ‘ನೆರವು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ಬಲಶಾಲಿಗಳ ಮೇಲೆ ಸಾಧಿಸುವ ಗೆಲುವು ನಿಜವಾದ ಗೆಲುವು ಅಲ್ಲ. ಸಮಾಜದಲ್ಲಿನ ಅಸಹಾಯಕರಿಗೆ, ದುರ್ಬಲರಿಗೆ ಮಾಡುವ ಸಹಾಯದಲ್ಲಿ ನಿಜವಾದ ಗೆಲುವು ಇದೆ. ಇಂತಹ ವಿಶಿಷ್ಟ ಫಾರ್ಮುಲಾ ಇಟ್ಟುಕೊಂಡು ದಿಟ್ಟಹೆಜ್ಜೆ ಇಟ್ಟಿರುವ ಆಶಾ ಪ್ರಕಾಶ್ ಶೆಟ್ಟಿ ನೆರವು ಕಾರ್ಯಕ್ರಮ ವಿನೂತನ ಪ್ರಯೋಗ. ಇನ್ನೊಬ್ಬರ ಹಿತಕ್ಕಾಗಿ ನಿಷ್ಠೆಯಿಂದ, ನಂಬಿಕೆಯಿಂದ ಮಾಡುವ ಕೆಲಸದಲ್ಲಿ ನಮ್ಮ ಯಶಸ್ಸು ಅಡಗಿದೆ. ಅಶಕ್ತರಿಗೆ ನೆರವು ನೀಡುವ ಪ್ರಕಾಶ್ ಶೆಟ್ಟಿ ಅವರ ಮಾನವೀಯ ಗುಣ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿ ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂಆರ್ ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ಬಡತನದಲ್ಲಿ ಹುಟ್ಟಿದ ನನಗೆ ಬಡತನದ ಬದುಕಿನ ಬವಣೆಯ ಅರಿವು ಇದೆ. ನಾನು ಮಾಡಿದ ಸಂಪಾದನೆ ಸಮಾಜಕ್ಕೆ, ಸಮಾಜಮುಖಿ ಕೆಲಸಕ್ಕೆ ಸರಿಯಾಗಿ ವಿನಿಯೋಗ ಆಗಬೇಕು ಎಂಬ ಕಾರಣಕ್ಕೆ ನನ್ನ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ಮುಡಿಪಾಗಿಟ್ಟಿದ್ದೇನೆ ಎಂದರು. ಅಶಕ್ತರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಅರೋಗ್ಯವನ್ನು ನೀಡುವ ಉದ್ದೇಶದಿಂದ ಎಂ.ಆರ್.ಜಿ. ಗ್ರೂಪ್ ಮೂಲಕ ಪ್ರತಿವರ್ಷ ನೆರವು ನೀಡುವ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇನೆ. 1. 25 ಕೋಟಿಯಿಂದ ಆರಂಭ ಆದ ನೆರವು 4 ಕೋಟಿಗೆ ಬಂದು ತಲುಪಿದೆ. ಸಮಾಜದ ನೊಂದವರು, ಅಶಕ್ತರಿಗೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನನ್ನ ಎದುರು ಇನ್ನೂ ಸಾಕಷ್ಟು ಮಂದಿಗೆ ಸಹಾಯ ಮಾಡಬೇಕು ಎಂಬ ಮನಸ್ಸು, ತುಡಿತ ಇದೆ. ಸಾವಿರಾರೂ ಸಂಖ್ಯೆಯ ಅರ್ಜಿಗಳು ಬಂದಿದ್ದವು, ಆದರೆ ಅವರೆಲ್ಲರಿಗೂ ಸಹಾಯ ಮಾಡಬೇಕು ಮನಸ್ಸು ತುಂಬಿ ಬಂದಿತ್ತು. ಆದರೆ ಅಷ್ಟು ನನ್ನಿಂದ ಆಗಲಿಲ್ಲ, ಸಣ್ಣ ಅಳಿಲು ಸೇವೆ ಮಾಡಿದ್ದೇನೆ ಸ್ವೀಕರಿಸಿ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಪ್ರಾಸ್ತಾವಿಕ ಮಾತನಾಡಿ, ಪ್ರಕಾಶ್ ಶೆಟ್ಟಿ ಸಮಾಜದ ಎಲ್ಲಾ ಸಮುದಾಯದ ಬಡವರಿಗೆ ನೆರವು ಶಿಕ್ಷಣ, ಆರೋಗ್ಯ ಇತರ ಮೂಲಭೂತ ಅಗತ್ಯಗಳಿಗೆ ತಮ್ಮ ದುಡಿಮೆಯ ಒಂದು ಭಾಗವನ್ನು ಕೊಡುಗೆಯಾಗಿ ನೀಡುವ ಮೂಲಕ ಸಮಾಜದ ಋಣ ತೀರಿಸುತ್ತಿದ್ದಾರೆ. ಅವರ ಈ ಮನೋಭಾವ ನಮ್ಮೆಲ್ಲರಿಗೂ ಮಾದರಿ ಆಗಿದೆ ಎಂದರು. ದ್ವಿತೀಯ ಪಿಯುಸಿಯಲ್ಲಿ 600 ಅಂಕ ಗಳಿಸಿದ ಆಳ್ವಾಸ್ ಕಾಲೇಜಿನ ಅನನ್ಯಾ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕ ಗಳಿಸಿದ ವೀಕ್ಷಿತಾ ಅವರನ್ನು ಸನ್ಮಾನಿಸಿ ವಿದ್ಯಾರ್ಥಿ ವೇತನ ನೀಡಲಾಯಿತು. ನೆರವು ಕಾರ್ಯಕ್ರಮದಲ್ಲಿ 1894 ಮಂದಿಗೆ ಸಹಾಯದ ಚೆಕ್ ವಿತರಣೆ ಮಾಡಲಾಯಿತು. ಕ್ರೀಡೆ, ಶಿಕ್ಷಣ, ಶೌಚಾಲಯ, ಬುದ್ದಿಮಾಂದ್ಯ ಶಾಲೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ಕೆ ಸಹಾಯ ಮಾಡಲಾಯಿತು. ಎಂಆರ್ ಜಿ ಸಮೂಹ ಸಂಸ್ಥೆ ಗಳ ಆಡಳಿತ ನಿರ್ದೇಶಕ ಗೌರವ್ ಶೆಟ್ಟಿ , ಆಶಾ ಪ್ರಕಾಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿ, ನಿತೇಶ್ ಶೆಟ್ಟಿ, ಪುರುಷೋತ್ತಮ ಭಂಡಾರಿ ನೆರವು ಕಾರ್ಯಕ್ರಮ ನಿರೂಪಿಸಿದರು. ಅನುಷ್ಕಾ ಗೌರವ ಶೆಟ್ಟಿ ವಂದಿಸಿದರು.