ಮಂಗಳೂರು: ಭಾರತೀಯ ನಾಗರಿಕ ಸುರಕ್ಷತಾ ಸಂಹಿತ 2023, ಭಾರತೀಯ ನ್ಯಾಯ ಸಂಹಿತ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಡಿ.25ರಂದು ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮೂರು ಮಸೂದೆಗಳಿಗೆ ಹಸ್ತಾಕ್ಷರ ಹಾಕಿದ್ದು, ರಾಷ್ಟ್ರಪತಿಯವರ ವೆಬ್‌ಸೈಟ್‌ನಲ್ಲಿ ಈ ವಿಷಯವನ್ನು ಪ್ರಕಟಿಸಲಾಗಿದೆ.
ಭಾರತೀಯ ದಂಡ ಸಂಹಿತೆ, ಅಪರಾಧಿಕ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗೆ ಪರ್ಯಾಯವಾಗಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತ 2023, ಭಾರತೀಯ ನ್ಯಾಯ ಸಂಹಿತ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಅಸ್ತಿತ್ವಕ್ಕೆ ಬರಲಿದೆ. ಕಳೆದ ಆಗಸ್ಟ್ 11ರಂದು ಲೋಕಸಭೆಯಲ್ಲಿ ಪರ್ಯಾಯ ಮೂರು ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಕೆಲವು ತಿದ್ದುಪಡಿಗಳೊಂದಿಗೆ ಹೊಸದಾಗಿ ಈ ಕಾಯ್ದೆಯನ್ನು ಮಂಡಿಸಿ ಕಳೆದ ಡಿಸೆಂಬರ್ 20ರಂದು ಈ ಮೂರು ಮಸೂದೆಗಳನ್ನು ಅಂಗೀಕರಿಸಲಾಯಿತು. ಸಂಸದರ ಅಮಾನತು ಮಧ್ಯೆ ಈ ಮಸೂದೆ ಅಂಗೀಕಾರಗೊಂಡಿದ್ದು, ರಾಜ್ಯ ಸಭೆಯಲ್ಲಿ ಮರುದಿನ ಅಂದರೆ ಡಿ.21ರಂದು ಈ ಮೂರು ಮಸೂದೆಗಳನ್ನು ಪಾಸ್ ಮಾಡಲಾಗಿತ್ತು.