ಮಂಗಳೂರು(ಬೆಂಗಳೂರು): ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಹಿಂಬದಿ ಸವಾರ ಮೂರನೇ ವ್ಯಕ್ತಿ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬೈಕ್‍ನ ಹಿಂಬದಿ ಸವಾರನ ಸಾವಿಗೆ ಬೈಕ್ ಮಾಲಕನೇ ಪರಿಹಾರ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ.
ತುಮಕೂರಿನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ ಇನ್ನೂರೆನ್ಸ್ ಕಂಪೆನಿಗೆ ಪರಿಹಾರ ನೀಡಲು ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ್ದಲ್ಲದೆ, ನ್ಯಾಯಮಂಡಳಿ ನಿಗದಿಪಡಿಸಿದ ಪರಿಹಾರದ ಹಣವನ್ನು ಮೃತರ ಕುಟುಂಬಸ್ಥರಿಗೆ ನೀಡುವಂತೆ ವಾಹನದ ಮಾಲಕ ನಿಝಾಮುದ್ದೀನ್ ಅವರಿಗೆ ಹೈಕೋರ್ಟ್ ಆದೇಶಿಸಿದೆ.
2011ರ ಮಾ.24 ರಂದು ಸಿದ್ದೀಕ್ ಉಲ್ಲಾಖಾನ್ ಎಂಬವರು ಕುಣಿಗಲ್ ಬಳಿ ನಿಝಾಮುದ್ದೀನ್ ಎಂಬಾತನ ಬೈಕ್‌ನಲ್ಲಿ ಹಿಂದೆ ಕೂತು ಸವಾರಿ ಮಾಡುತ್ತಿದ್ದರು. ಚಾಲಕ ನಿಝಾಮುದ್ದೀನ್ ರವರ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಹೀರೋ ಹೋಂಡಾ ಬೈಕ್ ಹಳ್ಳಕ್ಕೆ ಬಿದ್ದಿತ್ತು. ಈ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರ ಸಿದ್ದೀಕ್ ಉಲ್ಲಾಖಾನ್ ಅವರನ್ನು ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 26, 2011 ರಂದು ಅವರು ಮೃತಪಟ್ಟಿದ್ದರು. ನಂತರದ ಬೆಳವಣಿಗೆಯಲ್ಲಿ ಮೃತ ಸಿದ್ದೀಕ್ ಉಲ್ಲಾಖಾನ್ ಕುಟುಂಬ ಸದಸ್ಯರು ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಸಿದ್ದೀಕ್ ಉಲ್ಲಾಖಾನ್ ಚಿಕಿತ್ಸೆ ಮತ್ತು ಇತರ ವೆಚ್ಚಗಳಿಗಾಗಿ 1.2 ಲಕ್ಷ ರೂ. ಖರ್ಚು ಮಾಡಿದ್ದು, ಒಟ್ಟು 15 ಲಕ್ಷ ರೂ. ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿರುವ ಕುಣಿಗಲ್ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ 2017ರ ಆ.24ರಂದು, ವಾರ್ಷಿಕ ಶೇ.6 ರಷ್ಷು ಬಡ್ಡಿಯೊಂದಿಗೆ 7,27,114 ರೂ.ಗಳನ್ನು ಪರಿಹಾರವಾಗಿ ನೀಡುವಂತೆ ವಿಮಾ ಸಂಸ್ಥೆಗೆ ಆದೇಶಿಸಿತ್ತು.
ವಾಹನದ ಆಸನದ ಸಾಮರ್ಥ್ಯ 1+1 ಆಗಿರುತ್ತದೆ, ಅದರ ಆಧಾರದ ಮೇಲೆ ಕುಣಿಗಲ್ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ವಿಮಾ ಕಂಪೆನಿಯ ಮೇಲೆ ಪರಿಹಾರ ನೀಡುವ ಹೊಣೆಗಾರಿಕೆಯನ್ನು ನಿಗದಿಪಡಿಸಿದೆ. ಆದರೆ ನ್ಯಾಯಾಧೀಕರಣದ ಆದೇಶ ಸೂಕ್ತವಾಗಿಲ್ಲ ಎಂದು ತನ್ನ ಆದೇಶದಲ್ಲಿ ಹೇಳಿರುವ ಹೈಕೋರ್ಟ್ ಪರಿಹಾರ ಪಾವತಿಸುವ ಹೊಣೆಯನ್ನು ಬೈಕ್ ಮಾಲಕನಿಗೆ ವರ್ಗಾಯಿಸಿದೆ.