ಮಂಗಳೂರು(ಉಡುಪಿ): ಕನ್ನಡದ ಹಿರಿಯ ಸಾಹಿತಿ ಕೆ.ಶಾರದಾ ಭಟ್ (75) ಅವರು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಜ.1ರ ರಾತ್ರಿ ನಿಧನರಾಗಿದ್ದಾರೆ.
ಕೊಂಕಣಿ ಕಾದಂಬರಿ ಸೇರಿದಂತೆ ಒಟ್ಟು ಇಪ್ಪತ್ತಕ್ಕೂ ಹೆಚ್ಚು ಕೃತಿ ಬರೆದಿರುವ ಇವರು ಸಾಹಿತ್ಯ , ಸಂಘಟನೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದರು. ಅತ್ಯುತ್ತಮ ಸಂಘಟಕರು, ಅಂಕಣ ಬರಹಗಾರರಾಗಿದ್ದ ಶಾರದಾ ಅವರು ಹತ್ತು ವರ್ಷಗಳ ಕಾಲ ʼಚಡಗ ಕಾದಂಬರಿ ಪ್ರಶಸ್ತಿ ಸಮಿತಿʼಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು. ಶಾರದಾ ಅವರ ಹಿರಿಯ ಸಹೋದರಿ ಲೇಖಕಿ ತಾರಾ ಭಟ್ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಶಾರದಾ ಅವರ ನಿಧನ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಹಾಗೂ ಡಾ.ಎನ್. ಭಾಸ್ಕರಾಚಾರ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಶಾರದಾ ಭಟ್ ಅವರ ಇಚ್ಛೆಯಂತೆ ಅವರ ದೇಹವನ್ನು ಸಂಶೋಧನೆಗಾಗಿ ಮಣಿಪಾಲ ಆಸ್ಪತ್ರೆಗೆ ನೀಡಲಾಗಿದೆ.