ಮಂಗಳೂರು: ನಮೋ ಬ್ರಿಗೇಡ್ ದ.ಕ.ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯಿಂದ ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ್ದ ಕರಸೇವಕರನ್ನು ಸನ್ಮಾನಿಸಲಾಯಿತು.
ನಗರದ ವಿ.ಟಿ. ರೋಡ್ ನಲ್ಲಿರುವ ಶ್ರೀವಿಠೋಭ ರುಕುಮಾಯಿ ಮಂದಿರದ ಸಭಾಂಗಣದಲ್ಲಿ 63 ಕರಸೇವಕರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ 1992ರ ಕರಸೇವೆಯ ದಿನಗಳನ್ನು ನೆನಪಿಸುವ ವೀಡಿಯೋವನ್ನು ಪ್ರದರ್ಶಿಸಲಾಯಿತು.
ಈ ವೇಳೆ ಕರಸೇವಕರು ಅಂದಿನ ತಮ್ಮ ಅನುಭವವನ್ನು ಸಭೆಯ ಮುಂದೆ ತೆರೆದಿಟ್ಟರು. ಎರಡು ಬಾರಿ ಕರಸೇವಕರಾಗಿ ಅಯೋಧ್ಯೆಗೆ ತೆರಳಿದ್ದ ವಿಚಾರವನ್ನು ಸವಿವರವಾಗಿ ಹೇಳಿದ ಕರಸೇವಕರು ಅಂದಿನ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಸರಕಾರ ಪೊಲೀಸ್ ಬಲ ಪ್ರಯೋಗಿಸಿ ಕರಸೇವಕರನ್ನು ಹತ್ತಿಕ್ಕಲು ಯತ್ನಿಸಿದ್ದು, ಕರಸೇವಕರನ್ನು ಉತ್ತರ ಪ್ರದೇಶಕ್ಕೆ ಬಾರದಂತೆ ತಡೆಯುವ ಪ್ರಯತ್ನ ಮಾಡಿದ್ದಲ್ಲದೆ, ರಸ್ತೆಗಳನ್ನೇ ಅಗೆದು ಡಾಮರ್ ಡಬ್ಬಗಳನ್ನು ಇಟ್ಟು ನೆಟ್ ಹಾಕಿ ತಡೆದಿರುವ ಘಟನೆಯ ಕುರಿತಂತೆ ತಮ್ಮ ಅನುಭವವನ್ನು ಮತ್ತೆ ನೆನಪಿಸಿಕೊಂಡರು.