ನಿಷ್ಕ್ರಿಯಗೊಂಡ ಬ್ಯಾಂಕ್‌ ಖಾತೆಗಳಿಗೆ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ ಅನ್ವಯ ಆಗಲ್ಲ: ರಿಸರ್ವ್ ಬ್ಯಾಂಕ್ ಸುತ್ತೋಲೆ

ಮಂಗಳೂರು(ದೆಹಲಿ): ವರ್ಷಗಳಿಂದ ಯಾವುದೇ ವಹಿವಾಟು ನಡೆಯದ ಬ್ಯಾಂಕ್‌ ಖಾತೆಗಳಿಗೆ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ ನಿಯಮ ಅನ್ವಯ ಆಗುವುದಿಲ್ಲ. ಹೀಗಾಗಿ ನಿಷ್ಕ್ರಿಯ ಖಾತೆಗಳಲ್ಲಿ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್ ಇಲ್ಲದಿದ್ದರೂ ಶುಲ್ಕವನ್ನು ಕಡಿತಗೊಳಿಸಬಾರದು ಎಂದು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್ ಸೂಚಿಸಿದ್ದು,  ಬ್ಯಾಂಕ್‌ ಗ್ರಾಹಕರಿಗೆ ನಿರಾಳತೆ ನೀಡಿದೆ.

ಈ ಹೊಸ ನಿಯಮಗಳ ಬಗ್ಗೆ ಆರ್‌ಬಿಐ ಸುತ್ತೋಲೆ ಹೊರಡಿಸಿದೆ. ಹೊಸ ನಿಯಮಗಳ ಪ್ರಕಾರ ವಿದ್ಯಾರ್ಥಿವೇತನ ಮತ್ತು ನೇರ ಲಾಭ ವರ್ಗಾವಣೆಗಾಗಿ ತೆರಯಲಾದ ಖಾತೆಗಳನ್ನು ನಿಷ್ಕ್ರೀಯಗೊಳಿಸಬಾರದು. ಎರಡು ವರ್ಷಗಳಿಂದ ಅಂತಹ ಖಾತೆಗಳಲ್ಲಿ ಯಾವುದೇ ವಹಿವಾಟು ನಡೆಯದಿದ್ದರೂ ಶುಲ್ಕ ವಿಧಿಸಬಾರದು. ಹಾಗೆಯೇ, ಬ್ಯಾಂಕ್‌ಗಳು ಖಾತೆ ನಿಷ್ಕ್ರೀಯಗೊಳಿಸುವ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ. ಈ ಹೊಸ ನಿಯಗಳು 2024ರ ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ.

ಹೊಸ ನಿಯಮದಂತೆ ಖಾತೆ ನಿಷ್ಕ್ರೀಯ ಮಾಡುವ ಬಗ್ಗೆ ಬ್ಯಾಂಕ್‌ಗಳು ಎಸ್‌ಎಂಎಸ್‌, ಇಮೇಲ್‌ ಅಥವಾ ಪತ್ರದ ಮೂಲಕ ಗ್ರಾಹಕರಿಗೆ ಮಾಹಿತಿ ತಲುಪಿಸಬೇಕು. ಖಾತೆಯ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದರೆ, ಬಳಿಕ ಖಾತೆದಾರರನ್ನು ಬ್ಯಾಂಕ್‌ಗಳು ಸಂಪರ್ಕಿಸಬೇಕು ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here