ಮಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷೀಯರ ವಿರುದ್ಧ ಆಪಾದನೆ ಮಾಡಿದ್ದು, ಈವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ. ಬಿಜೆಪಿ ವಿರುದ್ದದ ಆರೋಪದ ಮಾಹಿತಿ, ದಾಖಲೆ ಕೊಡಲು ಮೌಖಿಕವಾಗಿ ಹೇಳಿದ್ದೇವೆ. ಅಪಾದನೆ ಮಾಡುವುದರ ಜೊತೆಗೆ ತನಿಖಾ ಸಮಿತಿ ಮುಂದೆ ದಾಖಲೆಕೊಡಲು ಹೇಳಿದ್ದೇವೆ. ಆಯೋಗದ ವಿಚಾರಣೆ ವೇಳೆ ನೀಡಿದ್ರೆ ಉಪಯೋಗವಾಗುತ್ತದೆ ಎಂದು ಸಲಹೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನವರು ಹೋಗ್ತಾ ಇಲ್ಲ ಎನ್ನುವ ವಿಚಾರ ಮಾತ್ರ ಯಾಕೆ? ಅನೇಕ ಸ್ವಾಮೀಜಿಗಳು ರಾಮಮಂದಿರ ಉದ್ಘಾಟನೆಗೆ ಹೋಗಲ್ಲ ಅಂತಿದ್ದಾರೆ. ರಾಮಮಂದಿರಕ್ಕೆ ಹೋಗಲು ಯಾರ ಪರ್ಮಿಷನ್ ಬೇಕಾಗಿಲ್ಲ, ಆದರೆ ಅವತ್ತೇ ಹೋಗಬೇಕೆಂದೇನು ಇಲ್ಲ. ರಾಮಮಂದಿರ ನಿರ್ಮಾಣ ಅತ್ಯಂತ ಸಂತಸದ ವಿಚಾರ. ಈ ವಿಚಾರದಲ್ಲಿ ರಾಜಕೀಯ ವಾತಾವರಣ ನಿರ್ಮಾಣ ಸರಿಯಲ್ಲ ಎಂದು ಜಗದ್ಗುರು ಸ್ವಾಮೀಜಿಗಳೇ ಹೇಳ್ತಿದ್ದಾರೆ. ಇದು ಪೊಲಿಟಿಕಲ್ ಕ್ಯಾಂಪೇನ್ ಆಗಬಾರದು, ನಮಗೆಲ್ಲರಿಗೂ ಅಲ್ಲಿಗೆ ಹೋಗಲು ಆಸೆ ಇದೆ. ನಮ್ಮ ದೇಶದಲ್ಲಿ ಇದು ಒಳ್ಳೆಯ ಬೆಳವಣಿಗೆ, ರಾಜ್ಯದಲ್ಲೂ ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಯಲಿದೆ. ಗೌರವ ಎಲ್ಲರಿಗೂ ಇದೆ, ರಾಜಕಾರಣ ಬೆರೆಸಬಾರದು. ಆದರೆ ಇಲ್ಲಿ ರಾಜಕೀಯ ಲಾಭ ಮತ್ತು ಚುನಾವಣೆಗೋಸ್ಕರ ರಾಮಮಂದಿರವನ್ನು ಬಳಸಲಾಗ್ತಿದೆ. ದೇವಸ್ಥಾನಗಳು ಇರೋದು ನಮಗಾಗಿ. ಜನರು ಭಕ್ತಿಯಿಂದ ಮತ್ತು ಸ್ವ ಇಚ್ಛೆಯಿಂದ ಹೋಗ್ತಾರೆ, ಹೋಗದಿದ್ರೆ ಟೀಕೆ ಮಾಡಬಾರದು ಎಂದು ಹೇಳಿದರು.
ಡಿಸಿಎಂ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲ, ಅದೆಲ್ಲ ಪಕ್ಷದ ಆಂತರಿಕ ವಿಚಾರ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು, ಅನೈತಿಕ ಪೊಲೀಸ್ ಗಿರಿ ಸರಿಯಲ್ಲ, ಅದರ ವಿರುದ್ದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಆದರೆ ಹಿಂದೂ ಕಾರ್ಯಕರ್ತರು ಎಂದು ಹೇಳುವುದು ಸರಿಯಲ್ಲ. ನಾವು ಹಿಂದೂಗಳಲ್ವಾ? ಬಿಜೆಪಿ ಸರ್ಕಾರ ಹೇಳಿದ್ದನ್ನ ಯಾವುದನ್ನೂ ಜಾರಿಗೆ ತಂದಿಲ್ಲ ಎಂದು ಅವರು ಹೇಳಿದ್ದಾರೆ.