ಮಂಗಳೂರು: ಚಾರ್ಮಾಡಿ ಹಸನಬ್ಬ ಚಾರಿಟೇಬಲ್ ಟ್ರಸ್ಟ್ ನ ನೂತನ ಆ್ಯಂಬುಲೆನ್ಸ್ ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಚಾರ್ಮಾಡಿಯ 50 ಕಿ.ಮೀ. ವ್ಯಾಪ್ತಿಯಲ್ಲಿ ಅಪಘಾತಕ್ಕೊಳಗಾದ ಗಾಯಾಳುಗಳನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ಈ ಆ್ಯಂಬುಲೆನ್ಸ್ ಅನ್ನು ಬಳಸಲಾಗುವುದು ಎಂದು ಚಾರ್ಮಾಡಿ ಹಸನಬ್ಬ ಹೇಳಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ತನಗೆ ಲಭಿಸಿದ 5ಲಕ್ಷ ರೂ. ಮತ್ತು ಸಿಎ ಬ್ಯಾಂಕ್ ನಿಂದ ಮೂರು ಲಕ್ಷ ರೂ. ಸಾಲ ಪಡೆದು ಈ ಆ್ಯಂಬುಲೆನ್ಸ್ ಖರೀದಿಸಲಾಗಿದ್ದು, ಚಾರ್ಮಾಡಿ ಹಸನಬ್ಬ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಆ್ಯಂಬುಲೆನ್ಸ್ ನ್ನು ರಸ್ತೆಗಿಳಿಸಲಾಗಿದೆ. ಚಾರ್ಮಾಡಿಯಲ್ಲಿ ಸಣ್ಣ ಹೊಟೇಲ್ ಹೊಂದಿರುವ ಹಸನಬ್ಬ 1983ರಿಂದ ಚಾರ್ಮಾಡಿಯ 50ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಪಘಾತಕ್ಕೊಳಗಾದ ಗಾಯಾಳುಗಳನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿದ್ದರು. ಗಾಯಾಳುಗಳನ್ನು ಜಾತಿ, ಮತ ನೋಡದೆ ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಅವರಿಗೆ ಆಪತ್ಬಾಂಧವರಾಗಿ ನೆರವಾಗುತ್ತಿದ್ದರು. ಈಗಿನಂತೆ ಫೋನ್ ವ್ಯವಸ್ಥೆ ಇಲ್ಲದ ವೇಳೆ ಅಪಘಾತವಾಗಿದ್ದ ಸ್ಥಳಕ್ಕೆ ಧಾವಿಸಿ ಇದುವರೆಗೆ ಸಾವಿರಾರು ಮಂದಿಯನ್ನು ಚಾರ್ಮಾಡಿ ಹಸನಬ್ಬ ರಕ್ಷಿಸಿದ್ದಾರೆ. ಮಾತ್ರವಲ್ಲ ಪ್ರಪಾತಕ್ಕೆ ಬಿದ್ದಿದ್ದ ಎಷ್ಟೋ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಕಳೆದ ಅವಧಿಯಲ್ಲಿ ತಮಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ದೊರೆತ ಹಣವನ್ನು ಅಪಘಾತದ ಗಾಯಾಳುಗಳಿಗೆಂದೇ ಮೀಸಲಿಟ್ಟು ಆ್ಯಂಬುಲೆನ್ಸ್ ಖರೀದಿಸಿ ಉದಾರತೆ ಮೆರೆದಿರುವುದು ಹಸನಬ್ಬ ಅವರ ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ.