ಮಂಗಳೂರು(ಚೆನ್ನೈ): ಏಳು ವರ್ಷಗಳ ಹಿಂದೆ ಚೆನ್ನೈನಿಂದ ಪೋರ್ಟ್ ಬ್ಲೇರ್ ಗೆ ತೆರಳುತ್ತಿದ್ದ ಭಾರತೀಯ ವಾಯುಪಡೆಯ ಎಎನ್-32 ಸಾಗಾಣಿಕೆ ವಿಮಾನವು 29 ಸಿಬ್ಬಂದಿಗಳೊಂದಿಗೆ ನಾಪತ್ತೆಯಾಗಿತ್ತು. ಬಹುಶಃ ಅದೇ ವಿಮಾನದ ಅವಶೇಷಗಳನ್ನು ಚೆನ್ನೈ ಕಡಲ ತೀರದಿಂದ 140 ನಾಟಿಕಲ್ ಮೈಲುಗಳ ದೂರದ ಸಮುದ್ರದ ತಳದಲ್ಲಿ ಸ್ವಾಯತ್ತ ಜಲಾಂತರ್ಗಾಮಿ ವಾಹನವು ಪತ್ತೆ ಹಚ್ಚಿದೆ ಎಂದು ಜ.12ರಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 22, 2016ರ ಬೆಳಗ್ಗೆ 8.30ಕ್ಕೆ ಆರು ಮಂದಿ ವಿಮಾನ ಸಿಬ್ಬಂದಿ ಹಾಗೂ 23 ವಾಯುಪಡೆ ಸಿಬ್ಬಂದಿಯೊಂದಿಗೆ ಎಎನ್-32 ಮಧ್ಯಮ ಗಾತ್ರದ ಸಾಗಾಣಿಕೆ ವಿಮಾನವು ಚೆನ್ನೈನಿಂದ ಪೋರ್ಟ್ ಬ್ಲೇರ್ ಗೆ ವಾರದ ದಿನಚರಿಯಂತೆ ಪ್ರಯಾಣ ಬೆಳೆಸಿತ್ತಾದರೂ, ಅದು ತನ್ನ ಗಮ್ಯವನ್ನು ತಲುಪಿರಲೇ ಇಲ್ಲ. ಕೂಡಲೇ ಹಡಗುಗಳು ಹಾಗೂ ವಿಮಾನಗಳ ಮೂಲಕ ಭಾರಿ ಪ್ರಮಾಣದ ಶೋಧ ಕಾರ್ಯಗಳನ್ನು ನಡೆಸಲಾಗಿತ್ತಾದರೂ, ನಾಪತ್ತೆಯಾಗಿದ್ದ ಸಿಬ್ಬಂದಿಗಳು ಹಾಗೂ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಲಾಗಿರಲಿಲ್ಲ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಾಯುಪಡೆಯು, ಭೂವಿಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯು ಇತ್ತೀಚೆಗೆ ಆಳ ಸಮುದ್ರ ಶೋಧನೆ ಸಾಮರ್ಥ್ಯ ಹೊಂದಿರುವ ಸ್ವಾಯತ್ತ ಜಲಾಂತರ್ಗಾಮಿ ವಾಹನವನ್ನು ಎಎನ್-32 ವಿಮಾನವು ಕಡೆಯದಾಗಿ ನಾಪತ್ತೆಯಾಗಿದ್ದ ಸ್ಥಳದಲ್ಲಿ ನಿಯೋಜಿಸಿತ್ತು. ಈ ಶೋಧ ಕಾರ್ಯವನ್ನು ಸಮುದ್ರದ 3400 ಮೀಟರ್ ಅಡಿಯಲ್ಲಿ ನಡೆಸಲಾಗಿದ್ದು, ಇದಕ್ಕಾಗಿ ಮಲ್ಟಿ ಬೀಮ್ ಸೋನಾರ್ ಸೌಂಡ್ ನ್ಯಾವಿಗೇಶನ್ ಆ್ಯಂಡ್ ರೇಂಜಿಂಗ್, ಸಿಂಥೆಟಿಕ್ ಅಪರ್ಚರ್ ಸೋನಾರ್ ಹಾಗೂ ಹೈ ರೆಸಲ್ಯೂಶನ್ ಫೋಟೊಗ್ರಫಿಯನ್ನು ಹೊಂದಿದ್ದ ವಿವಿಧ ಪೇ ಲೋಡ್ ಗಳನ್ನು ಬಳಸಲಾಗಿತ್ತು. ಶೋಧ ಕಾರ್ಯದ ಚಿತ್ರಗಳು ಚೆನ್ನೈನ ಸಮುದ್ರ ತೀರದಿಂದ ಅಂದಾಜು 310 ಕಿಮೀ ದೂರದ ಸಮುದ್ರದಾಳದಲ್ಲಿ ಅಪಘಾತಕ್ಕೀಡಾಗಿರುವ ವಿಮಾನದ ಅವಶೇಷಗಳಿರುವುದನ್ನು ಪತ್ತೆಹಚ್ಚಿದೆ.
ಶೋಧ ಕಾರ್ಯದ ಚಿತ್ರಗಳನ್ನು ಕೂಲಂಕುಶವಾಗಿ ಪರಿಶೀಲಿಸಲಾಗಿದ್ದು, ಆ ಚಿತ್ರಗಳು ಎಎನ್-32 ವಿಮಾನದೊಂದಿಗೆ ಹೋಲುತ್ತಿವೆ ಎಂದು ಹೇಳಿರುವ ಭಾರತೀಯ ವಾಯುಪಡೆಯು, ಸಂಭವನೀಯ ಅಪಘಾತ ಸ್ಥಳದಲ್ಲಿ ಪತ್ತೆಯಾಗಿರುವಂತೆ, ಅದೇ ಸ್ಥಳದಲ್ಲಿ ಮತ್ತೊಂದು ವಿಮಾನ ನಾಪತ್ತೆಯಾಗಿರುವ ಈ ಹಿಂದಿನ ಯಾವುದೇ ಚರಿತ್ರೆ ದಾಖಲಾಗಿಲ್ಲ. ಹೀಗಾಗಿ ಅಲ್ಲಿ ಪತ್ತೆಯಾಗಿರುವ ಅವಶೇಷಗಳು ಎಎನ್-32 ವಿಮಾನದ ಅವಶೇಷಗಳಂತೆಯೇ ತೋರುತ್ತಿವೆ ಎಂದೂ ಹೇಳಿದೆ.
8 ವರ್ಷಗಳ ಹಿಂದೆ ನಡೆದ ದುರ್ಘಟನೆ:
2016ರ ಜುಲೈ 22ರಂದು ಸೇನಾ ಕರ್ತವ್ಯದ ಕಾರಣದಿಂದಾಗಿ ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್‌ನ ಪೋರ್ಟ್‌ಬ್ಲೇರ್‌ಗೆ ಪ್ರಯಾಣ ಬೆಳೆಸಿದ್ದ ಭಾರತೀಯ ವಾಯುಸೇನೆಯ ಎಎನ್-32 ಯುದ್ಧ ವಿಮಾನ ಬಂಗಾಳಕೊಲ್ಲಿ ಸಮುದ್ರದ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಡಿತಗೊಂಡಿತ್ತು. ಅದರಲ್ಲಿದ್ದ ಗುರುವಾಯನಕೆರೆಯ ಏಕನಾಥ ಶೆಟ್ಟಿ ಸೇರಿ 29 ಜನ ಸೈನಿಕರ ಸುಳಿವು ಕೂಡಾ ಸಿಕ್ಕಿರಲಿಲ್ಲ. ಬೆಳಗ್ಗೆ 8.30ಕ್ಕೆ ವಿಮಾನ ಹೊರಟಿದ್ದು, 9.12ಕ್ಕೆ ನಿಲ್ದಾಣದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್‌ಬ್ಲೇರ್‌ಗೆ ತಲುಪಬೇಕಿದ್ದ ವಿಮಾನ ಕಣ್ಮರೆಯಾಗಿರುವುದಾಗಿ ಮಧ್ಯಾಹ್ನ 1.50ಕ್ಕೆ ವಾಯುಸೇನೆ ಪ್ರಕಟಿಸಿತ್ತು. ಅಂದು ನಾಪತ್ತೆಯಾದ ವಿಮಾನ ಇದೀಗ ಪತ್ತೆಯಾಗಿದೆ ಎಂದು ವಾಯುಸೇನಾ ಪ್ರಕಟಣೆ ಹೊರಡಿಸಿದೆ. ಅಂದು ಸುಳಿವಿಗಾಗಿ ಕೇಂದ್ರ ಸರಕಾರ ಹಾಗೂ ಮಿಲಿಟರಿ ತಜ್ಞರು ಸತತ ಮೂರು ತಿಂಗಳು ನಡೆಸಿದ್ದ ಪ್ರಯತ್ನಗಳೂ ಫೇಲ್ ಆಗಿದ್ದವು. ಇದಕ್ಕಾಗಿ ಎರಡು ಪಿ-8ಎ ವಿಮಾನ, ಮೂರು ಡೋರ್ನಿಯರ್ ವಿಮಾನ, ಒಂದು ಜಲಾಂತರ್ಗಾಮಿ, ನೌಕಾ ಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ವಿಮಾನವೊಂದು ಕುರುಹೇ ಇಲ್ಲದಂತೆ ನಾಪತ್ತೆಯಾಗಿರುವುದು ವಾಯುಪಡೆಯ ಇತಿಹಾಸದಲ್ಲೇ ಪ್ರಥಮ ಬಾರಿ ಎಂದು ಹೇಳಲಾಗುತ್ತಿತ್ತು.