ವಿದ್ಯಾರ್ಥಿನಿಯ ಕೊಲೆ ಯತ್ನ ಪ್ರಕರಣ- ಆರೋಪಿಗೆ 18 ವರ್ಷ ಸಜೆ, 2 ಲಕ್ಷ ರೂ. ದಂಡ-2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತೀರ್ಪು

ಮಂಗಳೂರು: ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಕೊಲೆಗೆ ಪ್ರಯತ್ನಿಸಿದ ಪ್ರಕರಣದ ಆರೋಪಿಗೆ ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯ 18 ವರ್ಷ ಒಂದು ತಿಂಗಳ ಸಜೆ ಹಾಗೂ ಸಂತೃಷ್ಟೆಗೆ 2 ಲಕ್ಷ ರೂ. ದಂಡ ನೀಡುವಂತೆ ಆದೇಶ ನೀಡಿದೆ.

ಮಂಗಳೂರು ಶಕ್ತಿನಗರದ ನಿವಾಸಿ ಸುಶಾಂತ ಯಾನೆ ಶಾನ್ ತನ್ನನ್ನು ಪ್ರೀತಿಸಲು ನಿರಾಕರಿಸಿದ ದೇರಳಕಟ್ಟೆ ನಿವಾಸಿ ಕುಮಾರಿ ದೀಕ್ಷಾ ಎಂಬ ಯುವತಿಗೆ 2019ರ ಜೂನ್.28‌ ರಂದು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಹಿಂದುಗಡೆ 18 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದ. ನಂತರ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಬಜಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಅಂದಿನ ಉಳ್ಳಾಲ ಪೊಲೀಸ್ ಠಾಣೆಯ ಉಪ-ನಿರೀಕ್ಷಕ ಗುರಪ್ಪ ಕಾಂತಿ ಪ್ರಕರಣದ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜ.12 ರಂದು ಆರೋಪಿ ಸುಶಾಂತನಿಗೆ ಭಾರತೀಯ ದಂಡ ಸಂಹಿತೆಯ 341, 326, 354, 307, 309 ಕಲಂಗಳ ಅಡಿಯಲ್ಲಿ ಒಟ್ಟು 18 ವರ್ಷ ಕಠಿಣ ಕಾರಾಗೃಹ ವಾಸದ ಶಿಕ್ಷೆ ಮತ್ತು ಎರಡು ಲಕ್ಷ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜ್ಯೋತಿ ನಾಯಕ್ ವಾದಿಸಿದ್ದರು. ವಿಚಾರಣೆಯ ಸಮಯ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದ ಕಾರಣ ಆರೋಪಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಎರಡು ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಮಾನ್ಯ ಉಚ್ಚ ನ್ಯಾಯಾಲಯವು ಕೂಡ ಎರಡೂ ಬಾರಿ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಆರೋಪಿ ಸುಶಾಂತ್ ಜೂನ್ 2019 ರಿಂದ ಇಲ್ಲಿಯವರೆಗೆ ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಆರೋಪಿ ಸುಶಾಂತ್ ರೌಡಿ ಜಪಾನ್ ಮಂಕಿ ಯಾನೆ ರಾಜು ತಂಡದಲ್ಲಿ ಗುರುತಿಸಿಕೊಂಡಿದ್ದ ಮಾತ್ರವಲ್ಲ ಹಲವಾರು ಬಾರಿ ಜೈಲು ಸೇರಿದ್ದ.

ಸುಶಾಂತ್ ನೃತ್ಯ ತರಬೇತುದಾರನಾಗಿದ್ದು ಸಂತೃಸ್ಥೆ ಕಲಿಯುತ್ತಿದ್ದ ಕಾಲೇಜಿನಲ್ಲಿ ನೃತ್ಯ ಕಲಿಸುತ್ತಿದ್ದ. ಈ ಸಂದರ್ಭ ಇಬ್ಬರ ನಡುವೆ ಇದ್ದ ಗೆಳೆತನವನ್ನು ತಪ್ಪಾಗಿ ಅರ್ಥೈಸಿಕೊಂಡು ಪ್ರೀತಿಸುವಂತೆ, ಮದುವೆಯಾಗುವಂತೆ ಪೀಡಿಸುತ್ತಿದ್ದ. ಗಂಭೀರ ಗಾಯಗೊಂಡಿದ್ದ ಯುವತಿ ಕೆಎಸ್‌ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯ ದಾದಿಯ ಸೇವೆ ರಾಷ್ಟ್ರಮಟ್ಟದಲ್ಲಿ ಶ್ಲಾಘನೆಗೆ ಒಳಗಾಗಿತ್ತು.

LEAVE A REPLY

Please enter your comment!
Please enter your name here