ಅಯೋಧ್ಯೆ ರಾಮಲಲ್ಲಾನ ಪ್ರಾಣಪ್ರತಿಷ್ಟೆ- ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಶೃಂಗೇರಿ ಮಠದ ಸ್ವಾಮೀಜಿಗಳ ನಿರ್ಧಾರ- ಮಠದಿಂದ ಅಧಿಕೃತ ಪ್ರಕಟಣೆ

ಮಂಗಳೂರು (ಚಿಕ್ಕಮಗಳೂರು): ಶಂಕರಾಚಾರ್ಯರರಿಂದ ಸ್ಥಾಪಿತವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ದಕ್ಷಿಣಾಮ್ನಾಯ ಪೀಠ ಎಂದೇ ಪ್ರಖ್ಯಾತಿ ಪಡೆದಿರುವ, ಶೃಂಗೇರಿ ಮಠದ ಶ್ರೀಗಳು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಮಠವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.


ಶೃಂಗೇರಿ ಮಠದ ಇಬ್ಬರು ಗುರುವತ್ರಯರಾದ ಹಿರಿಯ ಯತಿಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿಗಳಾದ ವಿಧುಶೇಖರ ಶ್ರೀಗಳು ರಾಮಲಲ್ಲಾನ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.

ಮಠದ ಪ್ರತಿನಿಧಿಯಾಗಿ ಆಡಳಿತಾಧಿಕಾರಿ ಗೌರಿಶಂಕರ್ ಅಯೋಧ್ಯೆಯ ರಾಮಮಂದಿರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ಗುರುಗಳು ಅಯೋಧ್ಯೆಯ ರಾಮಮಂದಿರಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಸುಳ್ಳು ಸುದ್ದಿಯನ್ನ ಹರಿಬಿಡುತ್ತಾರೆ. ಮತ್ತೊಮ್ಮೆ ಗುರುಗಳು ಅಯೋಧ್ಯೆ ಕಾರ್ಯಕ್ರಮಕ್ಕೆ ತೆರಳುತ್ತಾರೆ ಎಂದು ಸಂದೇಶ ಹಾಕುತ್ತಾರೆ. ಇದು ಶುದ್ಧ ಸುಳ್ಳು. ಗುರುಗಳು ಅಯೋಧ್ಯೆಗೆ ಹೋಗುತ್ತಿಲ್ಲ. ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ರಾಮ ಮಂದಿರ ಟ್ರಸ್ಟ್‍ನ ಸದಸ್ಯರು ಆಗಿರುವ ವಿಧುಶೇಖರ ಶ್ರೀಗಳು ಜನವರಿ 22ಕ್ಕೆ ಅಯೋಧ್ಯೆಯಲ್ಲಿನ ರಾಮಮಂದಿರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ. ಗುರುಗಳು ಭಕ್ತವೃಂದಕ್ಕೆ ಎಲ್ಲರೂ ಜ.22ರಂದು ರಾಮತಾರಕ ಜಪ ಹಾಗೂ ರಾಮಭುಜಂಗ ಸ್ತೋತ್ರ ಪಠಿಸುವಂತೆ ಕರೆ ನೀಡಿದ್ದಾರೆ.

ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು 8 ನೇ ಶತಮಾನದಲ್ಲಿ ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿ ಶಾರದಾಪೀಠವು ಮೊದಲನೆಯದು. ಶಂಕರಾಚಾರ್ಯರು ಸ್ಥಾಪಿಸಿದ್ದ ನಾಲ್ಕು ಮಠಗಳ ಪೈಕಿ ಮೂರು ಮಠಗಳು ಅಯೋಧ್ಯೆ ಕಾರ್ಯಕ್ರಮಕ್ಕೆ ಗೈರಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here