ವೈದ್ಯರಿಂದ ರೋಗಿಗಳಿಗೆ ಆ್ಯಂಟಿಬಯಾಟಿಕ್ ಶಿಫಾರಸು – ಕಾರಣಗಳನ್ನು ಉಲ್ಲೇಖಿಸಲು ವೈದ್ಯರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ

ಮಂಗಳೂರು(ಹೊಸದಿಲ್ಲಿ): ಹೆಚ್ಚುತ್ತಿರುವ ಆ್ಯಂಟಿಬಯಾಟಿಕ್ ಪ್ರತಿರೋಧಕತೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಕ್ರಮ ಕೈಗೊಂಡಿದೆ. ಸಚಿವಾಲಯವು, ರೋಗಿಗಳಿಗೆ ಆ್ಯಂಟಿಬಯಾಟಿಕ್‌ಗಳನ್ನು ಶಿಫಾರಸು ಮಾಡುವಾಗ ಕಾರಣಗಳನ್ನು ಉಲ್ಲೇಖಿಸುವಂತೆ ವೈದ್ಯರಿಗೆ ಸೂಚಿಸಿದೆ.

ಆ್ಯಂಟಿಬಯಾಟಿಕ್‌ಗಳನ್ನು ಶಿಫಾರಸು ಮಾಡುವಾಗ ರೋಗಲಕ್ಷಣಗಳು, ಕಾರಣ ಮತ್ತು ಸಮರ್ಥನೆಯನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕು ಎಂದು ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಡಾ.ಅತುಲ್ ಗೋಯೆಲ್ ಅವರು ವೈದ್ಯಕೀಯ ಕಾಲೇಜುಗಳ ವೈದ್ಯರಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ. ವೈದ್ಯರು ಮಾತ್ರವಲ್ಲ, ಔಷಧಿ ವ್ಯಾಪಾರಿಗಳೂ ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ನಿಯಮಗಳ ಪರಿಚ್ಛೇದ ಎಚ್ ಮತ್ತು ಎಚ್‌1ಗಳನ್ನು ಪಾಲಿಸಬೇಕು ಮತ್ತು ಅರ್ಹ ಹಾಗೂ ನೋಂದಾಯಿತ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಶನ್‌ಗಳ ಆಧಾರದಲ್ಲಿ ಮಾತ್ರ ಆ್ಯಂಟಿಬಯಾಟಿಕ್‌ಗಳನ್ನು ಮಾರಾಟ ಮಾಡಬೇಕು ಎಂದು ಡಾ.ಗೋಯೆಲ್ ಅವರು ಎಲ್ಲ ಔಷಧಿ ವ್ಯಾಪಾರಿಗಳ ಸಂಘಟನೆಗಳಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ. ಕೆಲವು ಪ್ರಬಲ ಆ್ಯಂಟಿಬಯಾಟಿಕ್‌ಗಳು ಎಚ್‌1 ಔಷಧಿಗಳ ಪಟ್ಟಿಯಲ್ಲಿವೆ.

ಅನಗತ್ಯವಾಗಿ ಆ್ಯಂಟಿಬಯಾಟಿಕ್‌ಗಳು ಅಥವಾ ಆ್ಯಂಟಿಮೈಕ್ರೋಬಿಯಲ್‌ಗಳನ್ನು ಸೇವಿಸುವುದರಿಂದ ಶರೀರವು ಅವುಗಳಿಗೆ ಪ್ರತಿರೋಧಕತೆಯನ್ನು ಬೆಳೆಸಿಕೊಳ್ಳುತ್ತದೆ ಮತ್ತು ಅಗತ್ಯ ಸಂದರ್ಭದಲ್ಲಿ ಈ ಔಷಧಿಗಳು ಕೆಲಸ ಮಾಡುವುದಿಲ್ಲ. ಆ್ಯಂಟಿಮೈಕ್ರೋಬಿಯಲ್ ರಸಿಸ್ಟನ್ಸ್ ಎಂದು ಕರೆಯಲಾಗುವ ಇದು ವಿಶ್ವದಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ ಬೆದರಿಕೆಗಳಲ್ಲಿ ಒಂದಾಗಿದೆ. ಎಎಂಆರ್ ಆಧುನಿಕ ಔಷಧಿಗಳ ಹೆಚ್ಚಿನ ಲಾಭಗಳನ್ನು ವ್ಯರ್ಥಗೊಳಿಸುತ್ತದೆ. ಅದು ಸೋಂಕುಗಳಿಗೆ ಚಿಕಿತ್ಸೆ ನೀಡುವುದನ್ನು ಕಠಿಣಗೊಳಿಸುತ್ತದೆ ಮತ್ತು ಶಸ್ತ್ರಚಿಕಿತ್ಸೆ,ಸಿಸೇರಿಯನ್ ಮತ್ತು ಕ್ಯಾನ್ಸರ್ ಕೆಮೊಥೆರಪಿಯಂತಹ ಇತರ ವೈದ್ಯಕೀಯ ಪ್ರಕ್ರಿಯೆಗಳು ಮತ್ತು ಚಿಕಿತ್ಸೆಯನ್ನು ಹೆಚ್ಚು ಅಪಾಯಕಾರಿಯಾಗಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ.

LEAVE A REPLY

Please enter your comment!
Please enter your name here