ಮಂಗಳೂರು/ಮಿಜೋರಾಂ : ಮ್ಯಾನ್ಮಾರ್ ಸೇನೆಗೆ ಸೇರಿದ ವಿಮಾನವೊಂದು ಮಿಜೋರಾಂನ ರಾಜಧಾನಿ ಐಜ್ವಾಲ್‌ನ ಹೊರವಲಯದಲ್ಲಿರುವ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ. ಜ.23ರಂದು ಈ ಘಟನೆ ನಡೆದಿದ್ದು, 8 ಮಂದಿ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ಮಿಜೋರಾಂನಿಂದ ಮ್ಯಾನ್ಮಾರ್ ಸೈನಿಕರನ್ನು ವಾಪಸ್ ಕರೆದೊಯ್ಯಲು ವಿಮಾನ ಬಂದಿತ್ತು. ಆದರೆ ರನ್‌ವೇನಲ್ಲಿ ವಿಮಾನ ಲ್ಯಾಂಡ್ ಆಗುವ ವೇಳೆ ಸ್ಕಿಡ್ ಆದ ಕಾರಣ ದುರಂತ ಸಂಭವಿಸಿದೆ. ಪೈಲಟ್ ಸೇರಿ ವಿಮಾನದಲ್ಲಿ 14 ಸಿಬ್ಬಂದಿಗಳಿದ್ದರು ಎನ್ನಲಾಗಿದೆ. ಈ ಪೈಕಿ 6 ಜನ ಸುರಕ್ಷಿತವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಿಜೋರಾಂ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಹೇಗಾಯಿತು ಎನ್ನುವ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಮ್ಯಾನ್ಮಾರ್‌ನ ದಕ್ಷಿಣ ಚಿನ್ ರಾಜ್ಯದ ಖಾನ್ಖಾ ಪರ್ವತದ ಮಿಲಿಟರಿ ನೆಲೆಯನ್ನು ಬಂಡುಕೋರರು ವಶಪಡಿಸಿಕೊಂಡ ಬಳಿಕ ಸೇನೆ ಮತ್ತು ಬಂಡುಕೋರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿತ್ತು. ಹೀಗಾಗಿ ಕನಿಷ್ಠ 276 ಮ್ಯಾನ್ಮಾರ್ ಸೇನಾ ಸಿಬ್ಬಂದಿ ಜನವರಿ 17 ರಂದು ಮಿಜೋರಾಂಗೆ ಬಂದು ಆಶ್ರಯ ಪಡೆದಿದ್ದರು. ಸೋಮವಾರ ಮ್ಯಾನ್ಮಾರ್ ಸೇನೆಗೆ ಸೇರಿದ ವಿಮಾನವು ಲೆಂಗ್‌ಪುಯಿ ವಿಮಾನ ನಿಲ್ದಾಣದಿಂದ ಎರಡು ಹಂತಗಳಲ್ಲಿ 184 ಸೈನಿಕರನ್ನು ಹಿಂದಕ್ಕೆ ಕರೆದೊಯ್ದಿದೆ. ಉಳಿದ 92 ಸೈನಿಕರನ್ನು ವಾಪಸ್ ಕರೆದುಕೊಂಡು ಹೋಗಲು ಮಂಗಳವಾರ ಬೆಳಗ್ಗೆ ಮತ್ತೆ ಬಂದಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.