‘ಯಕ್ಷರಂಗದ ರಾಜ’ ಖ್ಯಾತಿಯ ಪೆರುವಾಯಿ ನಾರಾಯಣ ಶೆಟ್ಟಿ ಇನ್ನಿಲ್ಲ-ಬಣ್ಣ ಕಳಚಿ ದೇವರ ಪಾದ ಸೇರಿದ‌ “ರಂಗನಾಯಕ” 

ಮಂಗಳೂರು: “ಯಕ್ಷರಂಗದ ರಾಜ” ಎಂದೇ ಖ್ಯಾತರಾದ, ಹೆಸರಾಂತ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ(82)  ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ ಕನ್ನಡ-ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ ಪೆರುವಾಯಿ ನಾರಾಯಣ ಶೆಟ್ಟರು, ಕಂಚಿನ ಧ್ವನಿ, ಪ್ರಾಸಬದ್ಧ ಮಾತು ಹಾಗೂ ಅರ್ಥಪೂರ್ಣ ಸಂಭಾಷಣೆಗೆ ಹೆಸರಾಗಿದ್ದರು.

ಬಂಟ್ವಾಳ ತಾಲೂಕು ಪೆರುವಾಯಿ ಇವರ ಹುಟ್ಟೂರು. 12ನೇ ವಯಸ್ಸಿನಲ್ಲೇ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದ ನಾರಾಯಣ ಶೆಟ್ಟಿ ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಗಳ ಸುಪುತ್ರರಾಗಿದ್ದಾರೆ. ಮಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ಮಾಡಿದ ಪೆರುವಾಯಿ ನಾರಾಯಣ ಶೆಟ್ಟಿ ಅವರದ್ದು ಬಹುದೊಡ್ಡ ಸಾಧನೆ. ಸುಮಾರು 52 ವರ್ಷಗಳ ಕಾಲ ನಿರಂತರ ತಿರುಗಾಟ ನಡೆಸಿ, ಅನಾರೋಗ್ಯಕ್ಕೆ ಒಳಗಾದ ಬಳಿಕ ಯಕ್ಷರಂಗದಿಂದ ನಿವೃತ್ತಿ ಪಡೆದಿದ್ದರು.

ನಾರಾಯಣ ಶೆಟ್ಟಿ, ರಕ್ತಬೀಜ, ಹಿರಣ್ಯಕಷ್ಯಪು, ಕಂಸ, ಸುಂದರರಾವಣ, ಋತುಪರ್ಣ, ಹನೂಮಂತ, ಜಾಬಾಲಿ, ಅರುಣಾಸುರ, ಹಿರಣ್ಯಾಕ್ಷ, ಶಿಶುಪಾಲ, ಕೋಟಿ, ದೇವುಪೂಂಜ ಮುಂತಾದ ಹಲವು ಪಾತ್ರಗಳಲ್ಲಿ ಪರಿಣಾಮಕಾರಿಯಾಗಿ ರಂಗದಲ್ಲಿ ನಟಿಸಿ, ಬಿಂಬಿಸಿ ಖ್ಯಾತರಾಗಿದ್ದರು. ಕೋಟಿ ಚೆನ್ನಯ ಪ್ರಸಂಗದಲ್ಲಿ ಕೋಟಿ ವೇಷದ ನಿರ್ವಹಣೆಯಲ್ಲಿ “ಪೆರುವಾಯಿ ಶೈಲಿ’ ಎಂಬ ಹೊಸ ವ್ಯಾಖ್ಯಾನಕ್ಕೆ ಶೆಟ್ಟಿ ಮುನ್ನುಡಿ ಬರೆದಿದ್ದರು. 2016ನೇ ಸಾಲಿನ ಚೊಚ್ಚಲ “ಯಕ್ಷಧ್ರುವ ಪಟ್ಲ ಪ್ರಶಸ್ತಿ” ಸೇರಿದಂತೆ ಹಲವು ಸನ್ಮಾನ ಇವರಿಗೆ ಸಂದಿದೆ.

LEAVE A REPLY

Please enter your comment!
Please enter your name here