ಮಂಗಳೂರು(ಅಯೋಧ್ಯೆ): ಹೊಸ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯ ರಾಮಮಂದಿರದ ಬಾಗಿಲುಗಳು ಮಂಗಳವಾರ ಸಾರ್ವಜನಿಕರಿಗೆ ತೆರೆದುಕೊಳ್ಳುತ್ತಿದ್ದಂತೆ ಜನರ ಪ್ರವಾಹವೇ ಹರಿದು ಬಂದಿದೆ.
ರಾಮಮಂದಿರ ಉದ್ಘಾಟನೆಯಾದ ದಿನವೇ 3 ಲಕ್ಷ ಭಕ್ತರು ಅಯೋಧ್ಯೆಯಲ್ಲಿ ರಾಮಲಲ್ಲಾ ದರ್ಶನಕ್ಕೆ ಆಗಮಿಸಿದ್ದು, ಮುಂಬರುವ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ. ಇಂದು ತುಂಬಾ ಜನರು ಜಮಾಯಿಸಿದ್ದಾರೆ. ಎಲ್ಲರಿಗೂ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ನಾಳೆ ಮತ್ತು ಮುಂದಿನ ದಿನಗಳಲ್ಲಿ ಇದೇ ರೀತಿ ಇರಲಿದೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ. ರಾಮ ಜನ್ಮಭೂಮಿಯಲ್ಲಿರುವ ರಾಮಮಂದಿರಕ್ಕೆ ಭಕ್ತರು ಬರುತ್ತಿರುವ ಬಗ್ಗೆ ಮಾತನಾಡಿದ ಆಚಾರ್ಯ ಸತ್ಯೇಂದ್ರ ದಾಸ್, ಇದು ‘ತ್ರೇತಾ ಯುಗ’ವನ್ನು ನೆನಪಿಸುತ್ತದೆ ಎಂದಿದ್ದಾರೆ. ಇದು ಭಗವಾನ್ ರಾಮನ ಯುಗವನ್ನು ನೆನಪಿಸುವ ದೈವಿಕ ವಾತಾವರಣವನ್ನು ಸೂಚಿಸುತ್ತದೆ. ನಾವು ತ್ರೇತಾಯುಗದ ಸಮಯದಲ್ಲಿ ಅಯೋಧ್ಯೆಗೆ ಹಿಂತಿರುಗಿದ್ದೇವೆ ಎಂದು ತೋರುತ್ತದೆ ಎಂದಿದ್ದಾರೆ.