ಮಂಗಳೂರು: ರಾಜ್ಯಾದ್ಯಂತ ಸರಕಾರಿ ಜಮೀನುಗಳ ಒತ್ತುವರಿ, ಕಬಳಿಕೆ ತಡೆಗೆ ಜಿಯೋ ಫೆನ್ಸಿಂಗ್ ಆಧರಿತ ‘ಬೀಟ್’ ವ್ಯವಸ್ಥೆ ಜಾರಿ ಮಾಡಲು ಸರಕಾರ ಮುಂದಾಗಿದ್ದು, ಇದಕ್ಕಾಗಿ ಎಲ್ಲಾ ಸರಕಾರಿ ಭೂಮಿಯ ಮಾಹಿತಿ (ಡೇಟಾ ಬೇಸ್) ಸಿದ್ಧಪಡಿಸಿದೆ. ಈ ಜಮೀನುಗಳ ಸ್ಥಳ, ವಿಸ್ತೀರ್ಣ, ಆಕಾರ್ ಬಂದ್ ಸಿದ್ಧಪಡಿಸಲು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಬಳಸಿ ಸರಕಾರಿ ಜಾಗಗಳ ನಕ್ಷೆ ಸಿದ್ಧಪಡಿಸಿ ಆನ್ ಲೈನ್ ನಲ್ಲಿ ಆಪ್ಲೋಡ್ ಮಾಡಲು ಕಂದಾಯ ಅಧಿಕಾರಿಗಳಿಗೆ ಮಾರ್ಚ್ ತಿಂಗಳಾಂತ್ಯದವರೆಗೆ ಗಡುವು ನೀಡಲಾಗಿದೆ.
ಜಿಯೋ ಫೆನ್ಸಿಂಗ್ ನೊಂದಿಗೆ ಸರಕಾರಿ ಜಾಗಗಳ ಸಮಗ್ರ ವಿವರಗಳನ್ನು ಕಲೆ ಹಾಕುವುದರೊಂದಿಗೆ ಬೀಟ್ ವ್ಯವಸ್ಥೆಯ ಮೊದಲ ಹಂತ ಮಾರ್ಚ್ ಗೆ ಪೂರ್ಣವಾಗಲಿದೆ. ಯಾವುದೇ ಸರಕಾರಿ ಭೂಮಿ ಒತ್ತುವರಿ ಪತ್ತೆಯಾದರೆ 15 ದಿನಗಳಲ್ಲಿ ತೆರವುಗೊಳಿಸುವ ಹೊಣೆಯನ್ನು ಆಯಾ ತಹಶೀಲ್ದಾರ್ ಗೆ ವಹಿಸಲಾಗಿದೆ.