ಮಂಗಳೂರು(ರಾಮನಗರ):ಇದು ಲಕ್ಷ್ಮಣರಾವ್ ಎಂಬಾತ ವಿಜಯಲಕ್ಷ್ಮಿ ಆಗಿ ಬದಲಾದ ವಿಚಿತ್ರ ಕಥೆ. ರಾಮನಗರ ಜಿಲ್ಲಾ ಕೇಂದ್ರದಲ್ಲಿ ನಡೆದ ಈ ವಿಚಿತ್ರ ಘಟನೆಗೆ ಪೊಲೀಸರೇ ಶಾಕ್ ಆಗಿದ್ದಾರೆ. ನಾಪತ್ತೆ ಆಗಿದ್ದ ಗಂಡ, ಮುತ್ತೈದೆ ರೀತಿ ಹೆಣ್ಣಾಗಿ ಪತ್ತೆಯಾಗಿದ್ದು, ತನ್ನ ಗಂಡನನ್ನು ಸ್ತ್ರೀ ರೂಪದಲ್ಲಿ ಕಂಡು ಪತ್ನಿ ಮೂರ್ಛೆಹೋದ ಘಟನೆಯೂ ನಡೆದಿದೆ.
ಲಕ್ಷ್ಮಣ ರಾವ್ ಎಂಬಾತ ತನ್ನ ಮದುವೆಗೂ ಮುನ್ನ ಚಿಕನ್ ಅಂಡಗಿಯಲ್ಲಿ ಕೆಲಸ ಮಾಡಿಕೊಂಡಿದ್ದ. 2015 ರಲ್ಲಿ ಆತನಿಗೆ ಮದುವೆಯಾಗಿದ್ದು, ರಾಮನಗರ ಪಟ್ಟಣದಲ್ಲಿ ಪತ್ನಿ ಜೊತೆ ಲಕ್ಷ್ಮಣ್ ವಾಸವಿದ್ದ. ಅನ್ಯೋನ್ಯವಾಗಿದ್ದ ಲಕ್ಷ್ಮಣ್ ರಾವ್ ದಂಪತಿಗೆ ಇಬ್ಬರು ಗಂಡು ಮಕ್ಕಳಾಗುತ್ತಿದ್ದಂತೆ ಗಂಡ ಲಕ್ಷ್ಮಣ್ ಮನೆಯಿಂದ ನಾಪತ್ತೆಯಾಗಿಬಿಟ್ಟ. ಲಕ್ಷ್ಮಣ್ 2017 ಮಾರ್ಚ್ ತಿಂಗಳಲ್ಲಿ ಮನೆ ಬಿಟ್ಟು ಹೋಗಿದ್ದ. ಸಾಲ ಮಾಡಿಕೊಂಡ ವಿಚಾರಕ್ಕೆ ಲಕ್ಷ್ಮಣ್ ಜಿಗುಪ್ಸೆಗೊಂಡಿದ್ದನಂತೆ. ಪತಿ ಲಕ್ಷ್ಮಣ್ ರಾವ್ ವಾಪಾಸ್ ಬರದ ಕಾರಣ ಪತ್ನಿ ದೂರು ದಾಖಲಿಸಿದ್ದಳು. ರಾಮನಗರ ಐಜೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ ಪೊಲೀಸರು ಲಕ್ಷ್ಮಣ್ ಗಾಗಿ ಊರು ಊರು ತಿರುಗಿ ಹುಡುಕಾಟ ಮಾಡಿದ್ದರು. ಆತನ ಮಡದಿ ತನ್ನಿಬ್ಬರು ಗಂಡು ಮಕ್ಕಳನ್ನು ಹೊತ್ತು ಗಂಡನಿಗಾಗಿ ಹುಡುಕಾಡಿದ್ದಳು.
ಗಂಡ ಲಕ್ಷ್ಮಣ್ ರಾವ್ ನಾಪತ್ತೆಯಾಗಿ ಎರಡು ವರ್ಷ ಕಳೆದ್ರೂ ಆತನ ಸುಳಿವು ಮಾತ್ರ ಸಿಗಲೇ ಇರಲಿಲ್ಲ. ಅಳಿಯ ಬಾರದ ಹಿನ್ನೆಲೆ ಮಕ್ಕಳಿಗಾಗಿ ಆದರೂ ಮತ್ತೊಂದು ಮದುವೆ ಆಗು ಎಂದು ಮಗಳಿಗೆ ತಂದೆ ಬುದ್ದಿವಾದ ಹೇಳಿದ್ದರು. ಆದರೆ ತಂದೆಯ ಮಾತನ್ನು ಧಿಕ್ಕರಿಸಿದ ಮಗಳು ಗಂಡ ಲಕ್ಷ್ಮಣ್ ರಾವ್ ಗಾಗಿ ಕಾದು ಕುಳಿತು ಆರು ವರ್ಷ ಸಂದರೂ ಆತನ ಪತ್ತೆ ಇರಲಿಲ್ಲ. ಇದಾದ ಬಳಿಕ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಲಕ್ಷ್ಮಣನ ಸುಳಿವು ಸಿಕ್ಕಿತ್ತು. ಮೈಸೂರಿನಲ್ಲಿ ಬಿಗ್ ಬಾಸ್ ಸ್ಪರ್ಧಿ ನೀತೂಗೆ ಸನ್ಮಾನ ಕಾರ್ಯಕ್ರಮ ನಡೆದಿತ್ತು. ಬಿಗ್ ಬಾಸ್ ಸ್ಪರ್ಧಿ ನೀತೂ ವನಜಾಕ್ಷಿ ಸ್ವಾಗತಕ್ಕೆ ತೃತೀಯ ಲಿಂಗಿಗಳು ತೆರಳಿದ್ದರು. ಆ ವೇಳೆ ಇದೇ ಲಕ್ಷ್ಮಣ್ ತೃತೀಯ ಲಿಂಗಿಗಳ ಸಾಮಾಜಿಕ ಹೋರಾಟಗಾರ್ತಿ ರಷ್ಮಿಕಾ ರೀಲ್ಸ್ ನಲ್ಲಿ ಹೆಣ್ಣಾಗಿ ಕಾಣಿಸಿಕೊಂಡಿದ್ದ. ವೈರಲ್ ಆದ ಆ ರೀಲ್ಸ್ ನಲ್ಲಿ ಲಕ್ಷ್ಮಣ್ ಮುಖ ಹೋಲಿಕೆ ಇತ್ತು. ಮೊಬೈಲ್ ನಲ್ಲಿ ರೀಲ್ಸ್ ವೀಕ್ಷಣೆ ಮಾಡಿದ ಪೊಲೀಸರಿಗೆ ಲಕ್ಷ್ಮಣ್ ಮುಖ ಹೋಲುವ ವ್ಯಕ್ತಿ ಪತ್ತೆಯಾದ. ಲಕ್ಷ್ಮಣ್ ಕುಟುಂಬಸ್ಥರಿಗೂ ಅದು ಲಕ್ಷ್ಮಣ್ ಇರಬಹುದು ಎಂಬ ಅನುಮಾನ ಮೂಡಿತ್ತು.
ರಷ್ಮಿಕಾ ಬೆನ್ನು ಹತ್ತಿದ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿತ್ತು. ಲಕ್ಷ್ಮಣ್ ಹಿನ್ನೆಲೆ ಗೊತ್ತಿಲ್ಲ ಎಂದ ರಶ್ಮಿಕಾ ಲಕ್ಷ್ಮಣ್ ವಿಳಾಸ ನೀಡಿದ್ದಳು. ರಷ್ಮಿಕಾ ಕೊಟ್ಟಿದ್ದ ವಿಳಾಸಕ್ಕೆ ತೆರಳಿದ್ದ ರಾಮನಗರ ಪೊಲೀಸರಿಗೆ ಶಾಕ್ ಕಾದಿತ್ತು. ಪೊಲೀಸರ ಬಳಿ ಇದ್ದ ಲಕ್ಷ್ಮಣ್ ರಾವ್ ಫೋಟೋಗೂ ಎದುರಿಗಿದ್ದ ಹೆಣ್ಣಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಆದರೆ ಮುಖದಲ್ಲಿ ಲಕ್ಷ್ಮಣ್ ರಾವ್ ಹೋಲಿಕೆ ಇತ್ತು. ನೀನು ಲಕ್ಷ್ಮಣ್ ರಾವ್ ಹೌದಲ್ಲವಾ? ಎಂದು ಪೊಲೀಸರು ಪ್ರಶ್ನಿಸಿದಾಗ, ನಾನು ವಿಜಯಲಕ್ಷ್ಮಿ ಎಂದು ಉತ್ತರಿಸಿದ್ದ. ಬಾಯಿ ಬಿಡಿಸಲು ಪ್ರಯತ್ನಿಸಿದ ಪೊಲೀಸರು ಒಂದು ಹಂತದಲ್ಲಿ ಇವನು ಲಕ್ಷ್ಮಣ್ ಅಲ್ಲ ಅನ್ನೋ ಅಭಿಪ್ರಾಯಕ್ಕೆ ಬಂದುಬಿಟ್ಟಿದ್ದರು. ಸರಿ ಹೋಗು ಎಂದು ಲಕ್ಷ್ಮಣ್ ನನ್ನು ಕಳುಹಿಸಿಕೊಟ್ಟು ಜೀಪು ಹತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ಗೆ ಅದೇನು ತೋಚಿತೋ ಗೊತ್ತಿಲ್ಲ, ಜೋರಾಗಿ ಲಕ್ಷ್ಮಣ್ ಅಂತ ಕೂಗಿದರು. ಆಶ್ಚರ್ಯ ಎಂಬಂತೆ ಕರೆಗೆ ಹಾಂ ಎಂದು ಲಕ್ಷ್ಮಣ್ ಯಾನೆ ವಿಜಯಲಕ್ಷ್ಮಿ ಅದಾಗಲೇ ಉತ್ತರ ಕೊಡುತ್ತಿದ್ದಂತೆ ಪೊಲೀಸರಿಗೆ ಎಲ್ಲವೂ ಖಾತ್ರಿಯಾಗಿತ್ತು. ವಿಚಾರಣೆಗೆಂದು ವಿಜಯಲಕ್ಷ್ಮಿ ಉರ್ಫ್ ಲಕ್ಷ್ಮಣನನ್ನು ರಾಮನಗರದ ಐಜೂರು ಠಾಣೆಗೆ ಕರೆ ತಂದರು.
2017ರಲ್ಲಿ ರಾಮನಗರ ಬಿಟ್ಟಿದ್ದ ಲಕ್ಷ್ಮಣ್ ರಾವ್ 2024ರಲ್ಲಿ ಹೆಣ್ಣಾಗಿ ಪರಿವರ್ತನೆಗೊಂಡಿರುವುದನ್ನು ಕಂಡ ಕುಟುಂಬದ ಸದಸ್ಯರು ಹೌಹಾರಿದರೆ, ಮಕ್ಕಳು ತಂದೆಯ ಅವತಾರ ಕಂಡು ಬೆದರಿದ್ದರು. ನಿನಗೆ ಹೆಂಡತಿ ಮಕ್ಕಳು ಬೇಕಿಲ್ಲವೇ ಎಂಬ ಪ್ರಶ್ನೆಗೆ, ನನಗೆ ನನ್ನ ತೃತೀಯ ಲಿಂಗಿಗಳ ಕುಟುಂಬವೇ ಇಷ್ಟ ಎಂದು ಹೇಳಿದ ವಿಜಯಲಕ್ಷ್ಮಿ ಉರ್ಫ್ ಲಕ್ಷ್ಮಣ್ ರಾವ್, ನನಗೆ ಹೆಂಡತಿ ಬೇಡ, ಮಕ್ಕಳು ಬೇಡ, ನನಗೆ ಮೊದಲಿನಿಂದಲೂ ಹೆಣ್ಣು ಅಂದರೆ ಆಗೋಲ್ಲ, ನಿಮ್ಮ ತಂಟಗೆ ಬರಲ್ಲ, ನನ್ನನ್ನು ಬಿಟ್ಟು ಬಿಡಿ ಎಂದು ಗೋಗರೆದ. ಅಳಿಯನ ಅವತಾರ ಕಂಡು ಮಗಳನ್ನು ಕೊಟ್ಟಿದ್ದ ಮಾವ, ಮಗಳ ಬಾಳು ಹಾಳು ಮಾಡಿ ಬಿಟ್ಟೆ ಎಂದು ಕಣ್ಣೀರಿಡುತ್ತಾ ಭಾರವಾದ ಹೃದಯದೊಂದಿಗೆ ಹೊರನಡೆಯುತ್ತಾನೆ. ಉಳಿದ ಕುಟುಂಬಸ್ಥರು ಆತನನ್ನು ಹಿಂಬಾಲಿಸುತ್ತಾರೆ. ಐಜೂರು ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ನಾಪತ್ತೆ ಪ್ರಕರಣ ಇತ್ಯರ್ಥ ಗೊಳಿಸುತ್ತಾರೆ.