ಮಂಗಳೂರು: ರಾಜಿಯಾದ ಪ್ರಕರಣಗಳ ವಿಚಾರಣೆಗೆ ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾ. ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ನ್ಯಾಯಾಲಯದಲ್ಲಿ ಅಥವಾ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಮತ್ತೆ ಮರುವಿಚಾರಣೆಗೆ ಕೋರಲು ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ರಾಜಿ ಮೂಲಕ ಇತ್ಯರ್ಥಪಡಿಸಿದ ಚೆಕ್ ಅಮಾನ್ಯ ಪ್ರಕರಣದ ಮರುವಿಚಾರಣೆ ಕೋರಿ ಸಲ್ಲಿಸಲಾಗಿದ್ದ ಮೆಮೋ ರದ್ದುಗೊಳಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಕ್ರಮವನ್ನು ಪ್ರಶ್ನಿಸಿ ಶೆಲ್ಲಿ ಎಂ ಪೀಟಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಸೆಕ್ಷನ್ 362ರ ಪ್ರಕಾರ ಒಮ್ಮೆ ಆದೇಶ ಪ್ರಕಟಿಸಿದ ನಂತರ ಅದನ್ನು ಬದಲಾಯಿಸಲು, ಮಾರ್ಪಡಿಸಲು ಮತ್ತು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ, ಮೆಮೋ ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ನ್ಯಾಯಪೀಠ, ಅರ್ಜಿದಾರರ ಮೆಮೋವನ್ನು ಕ್ರಿಮಿನಲ್ ಮಿಸಲೇನಿಯಸ್ ಕೇಸ್ ಅರ್ಜಿಯಾಗಿ ಪರಿಗಣಿಸಬೇಕು. ರಾಜಿ ಒಪ್ಪಂದದಂತೆ ಹಣ ಪಾವತಿಸಲು ವಿಫಲವಾಗಿರುವ ಪ್ರತಿವಾದಿ ಸಂಸ್ಥೆಗೆ ವಾರೆಂಟ್ ಜಾರಿ ಮಾಡಿ ಹಣ ವಸೂಲಿ ಪ್ರಕ್ರಿಯೆ ನಡೆಸಬೇಕು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಶೆಲ್ಲಿ ಎಂ. ಪೀಟರ್ ಮತ್ತು M/s ಬನ್ಯಾನ್ ಪ್ರಾಜೆಕ್ಟ್ಸ್ ಇಂಡಿಯಾ ಪ್ರೈ.ಲಿ. ನಡುವಿನ ಹಣಕಾಸು ವ್ಯವಹಾರದ ಪ್ರಕರಣವನ್ನು ಉಭಯ ಪಕ್ಷಕಾರರ ಇಚ್ಚೆಯ ಮೇರೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿತ್ತು. ಒಪ್ಪಂದದಂತೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಆದರೆ, ಆ ಬಳಿಕ ಒಪ್ಪಂದದ ಪ್ರಕಾರ ನೀಡಿದ ಚೆಕ್ ಗಳು ಅಮಾನ್ಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮತ್ತೆ ಆರಂಭಿಸುವಂತೆ ಶೆಲ್ಲಿ ಅವರು ನ್ಯಾಯಾಲಯಕ್ಕೆ ವಿಜ್ಞಾಪನೆ ಸಲ್ಲಿಸಿದ್ದರು. ಈ ಮೆಮೋ ವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಶೆಲ್ಲಿ ಎಂ. ಪೀಟರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ: ಶೆಲ್ಲಿ ಎಂ. ಪೀಟರ್ Vs M/s ಬನ್ಯಾನ್ ಪ್ರಾಜೆಕ್ಟ್ಸ್ ಇಂಡಿಯಾ ಪ್ರೈ.ಲಿ. ಕರ್ನಾಟಕ ಹೈಕೋರ್ಟ್, Crl.P. 3157/2020 Dated 20-09-2021