ವಿಕಸಿತ ಭಾರತಕ್ಕೆ ಮುನ್ನುಡಿ ಬರೆದ ಬಜೆಟ್ – ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ

ಮಂಗಳೂರು : ನರೇಂದ್ರ ಮೋದಿಯವರ ವಿಕಸಿತ ಭಾರತದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ನಿಟ್ಟಿನಲ್ಲಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಮಂಡಿಸಿದ ದೂರದೃಷ್ಟಿಯ, ಪ್ರಗತಿಶೀಲ ಮತ್ತು ವಿತ್ತೀಯ ಶಿಸ್ತಿನ ಮಧ್ಯಂತರ ಬಜೆಟ್ 2024ನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತೇನೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ ಹೇಳಿದ್ದಾರೆ.

ವಿಕಸಿತ ಭಾರತದ 4 ಸ್ತಂಭಗಳಾದ ಯುವಜನತೆ, ಬಡವರು, ಮಹಿಳೆಯರು ಮತ್ತು ರೈತರನ್ನು ಸಶಕ್ತಗೊಳಿಸುವ ಮೂಲಕ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭರವಸೆಯನ್ನು ಈ ಬಜೆಟ್ ನೀಡುತ್ತದೆ. ಈ ಬಜೆಟ್‌ನಲ್ಲಿ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಬಂಡವಾಳ ವೆಚ್ಚಕ್ಕೆ ಐತಿಹಾಸಿಕ ಗರಿಷ್ಠ 11,11,111 ಕೋಟಿ ರೂಪಾಯಿಗಳನ್ನು ನೀಡುವ ಮೂಲಕ ಭಾರತದ ಆಧುನಿಕ ಮೂಲಸೌಕರ್ಯ ನಿರ್ಮಾಣದೊಂದಿಗೆ ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ. ಸ್ಕಿಲ್ ಇಂಡಿಯಾ ಮಿಷನ್ ಯೋಜನೆಯಡಿ 1.4 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದ್ದು, ಪುನರ್ ಕೌಶಲ್ಯ ಯೋಜನೆಯಡಿ 54 ಲಕ್ಷ ಯುವಕರಿಗೆ ತರಬೇತಿ ನೀಡಲಾಗಿದೆ. ದೇಶದಲ್ಲಿ 3,000 ಐಟಿಐ, 7 ಐಐಟಿ, 16 ಐಐಐಟಿಎಸ್, 7 ಐಐಎಂಎಸ್, 15 ಎಐಐಎಂಎಸ್ ನ್ನು ನಿರ್ಮಿಸಿರುವ ಕಾರ್ಯ ಶ್ಲಾಘನೀಯ. ಮೀನುಗಾರಿಕೆಗೆ ಹೊಸ ಸಚಿವಾಲಯ ಸ್ಥಾಪನೆ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಬಡ, ಮಧ್ಯಮ ವರ್ಗದವರ ಅಭಿವೃದ್ಧಿ ಹಾಗೂ ಈ ಯೋಜನೆಯಡಿಯಲ್ಲಿ ಮೀನುಗಾರರ ಆರ್ಥಿಕತೆಯ ಅಭಿವೃದ್ಧಿಯ ಜೊತೆಗೆ 55 ಲಕ್ಷ ಉದ್ಯೋಗ ಸೃಷ್ಟಿಯಿಂದ ಕರಾವಳಿ ರಾಜ್ಯಗಳ ಅಭಿವೃದ್ಧಿಯ ಜೊತೆಗೆ ನಮ್ಮ ಕರಾವಳಿ ಕರ್ನಾಟಕಕ್ಕೆ ವಿಶೇಷ ಕೊಡುಗೆಯಾಗಲಿದೆ.

ರೂ 6.21 ಲಕ್ಷ ಕೋಟಿಯ ರಕ್ಷಣಾ ಕ್ಷೇತ್ರದ ಅನುದಾನ ನಮ್ಮ ಸೇನೆಗೆ ಇನ್ನಷ್ಟು ಬಲ ನೀಡಲಿದ್ದು, ಗಡಿಯ ರಕ್ಷಣೆ ಹಾಗೂ ಸೇನೆಯ ಸೌಕರ್ಯಗಳ ಆಧುನೀಕರಣಕ್ಕೆ ನೆರವಾಗಲಿದೆ. ಇದು ಹೆಚ್ಚಿನ ಭದ್ರತೆಗೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ. ಉತ್ಪಾದನೆಯ ವಿಷಯದಲ್ಲಿ ದೇಶವನ್ನು ಸ್ವತಂತ್ರಗೊಳಿಸುವ ಗುರಿಯೊಂದಿಗೆ ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಲಿದೆ. ದೇಶದ ಹಲವು ನಗರಗಳಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ, ಭವಿಷ್ಯದ ಸಾರಿಗೆ ಎಂದೇ ಬಿಂಬಿತವಾಗಿರುವ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಚಾರ್ಜಿಂಗ್ ಸ್ಟೇಷನ್ ಹೆಚ್ಚಳಕ್ಕೆ ಆದ್ಯತೆ, 40 ಸಾವಿರ ಹಳೆಯ ರೀತಿಯ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ, ಉಡಾನ್ ಯೋಜನೆಗೆ 517 ಹೊಸ ಮಾರ್ಗ ರೂಪಿಸುವ ಮೂಲಕ ಸಣ್ಣ ನಗರಗಳಿಗೂ ವಿಮಾನಯಾನ ಸೇವೆ ಒದಗಿಸುವ ಯೋಜನೆ ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದಂತಾಗಿದೆ. ಡೈರಿ ಉದ್ಯಮದಲ್ಲಿ ತೊಡಗಿರುವ ಕೃಷಿಕರಿಗೆ ನೆರವು, ರಾಸುಗಳಲ್ಲಿ ಕಂಡು ಬರುವ ಕಾಲು ಬಾಯಿ ರೋಗ ತಡೆಗೆ ಕ್ರಮ, ಪಿಎಂ ಫಸಲ್ ಬೀಮಾ ಯೋಜನೆಯಡಿ 4 ಕೋಟಿ ಕೃಷಿಕರಿಗೆ ಬೆಳೆ ವಿಮೆ, ಕೊಯ್ಲಿನ ನಂತರ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಸಂಸ್ಕರಣೆಗೆ ಖಾಸಗಿ ಹಾಗೂ ಸಾರ್ವಜನಿಕ ವಲಯದ ಸಹಭಾಗಿತ್ವದ ಪರಿಕಲ್ಪನೆ ಶ್ಲಾಘನೀಯ ನಡೆ. ದೇಶದ ಎಲ್ಲ ಜಿಲ್ಲೆಗಳಲ್ಲೂ ಆಸ್ಪತ್ರೆ ಸ್ಥಾಪನೆ, 9 ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ವಿಸ್ತರಣೆಯ ಮೂಲಕ ಆರೋಗ್ಯ ರಕ್ಷೆ ಒದಗಿಸಲಾಗಿದೆ.

ಈ ಮಧ್ಯಂತರ ಬಜೆಟ್ ಚುನಾವಣಾ ಪೂರ್ವ ಘೋಷಣೆಗಳ ಬಜೆಟ್ ಆಗದೆ ಜನ ಸಾಮಾನ್ಯನ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ನೆಚ್ಚಿನ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್, ಸಬ್ ಕಾ ವಿಶ್ವಾಸ್” ಎನ್ನುವ ದೂರ ದೃಷ್ಟಿಯ ಘೋಷಣೆಯನ್ನು ಸಕಾರಗೊಳಿಸುವ ವಿಕಸಿತ ಭಾರತಕ್ಕೆ ಮುನ್ನುಡಿ ಬರೆದ ಅತ್ಯಂತ ಸ್ವಾಗತರ್ಹ ಬಜೆಟ್ ಎಂದು ಬ್ರಿಜೇಶ್ ಚೌಟ ಹೇಳಿದ್ದಾರೆ.

LEAVE A REPLY

Please enter your comment!
Please enter your name here